ಬುಧವಾರ, ನವೆಂಬರ್ 30, 2016

ಬರೆಯಲಾರದೆ ಹೋದೆ ನಿನಗೊಂದು ಸಾಲೊಂದ...


ಬರೆಯಲಾರದೆ ಹೋದೆ ನಿನಗೊಂದು ಸಾಲೊಂದ...

ಹುಡುಕಿ ಹುಡುಕಿ ಸೋತೆ ನಾ ಹುಡುಗಿ
ಹುಟ್ಟುಹಬ್ಬಕ್ಕೊಂದು ಪುಟ್ಟ ಉಡುಗೊರೆಯ
ಅಂಗಾಲು ಸವೆದಿದೆ , ಮನ ಸೋತು ನಿಂತಿದೆ
ಸಮಸ್ತವೂ ನಿನ್ನ ಮುಂದೆ ಸಣ್ಣದಾಗಿದೆ

ಮುಗಿಲ ಕಾರ್ಮೋಡ ಕಣ್ತುಂಬ ತುಂಬಿ
ಧರೆಯಂತೆ ಧ್ಯಾನದಿ ಕಣ್ಮುಚ್ಚಿ ಕುಳಿತೆ
ಕಿವಿಯಿಟ್ಟು ಕೇಳಿದೆ ಮನದಂಚಿನ ಆಸೆಯ
ಮನಬಿಚ್ಚಿ ಹೇಳಿತು ಬರೆ ಒಂದು ಕವಿತೆಯ

ನೂರಾರು ಸಾಲನ್ನು ನೀರಂತೆ ಬರೆದ ಕೈ
ನಡುವಲ್ಲೆ ನಿಂತಿತು ಸುಡುಬಯಲ ನಡುವೆ
ಸಾಲದೇ ಹೋಯಿತು ವ್ಯಾಕರಣ ಮುಗಿದು
ಪದಗಳೇ ಸಿಗದಂತೆ ನಿನ್ನ ಹೊಗಳಲು ಇಂದು

ಹುಡುಕಲಾರದೇ ಸೋತೆ ಪುಟ್ಟ ಉಡುಗೊರೆಯೊಂದ
ಬರೆಯಲಾರದೆ ಹೋದೆ ಸೊಗಸಾದ ಸಾಲೊಂದ
ಬರಡಾದ ಮನಸಿನ ಶೂನ್ಯ ಭಾವವ ಕಳೆದು
ಕ್ಷಮಿಸು ನೀ ನನ್ನನ್ನು ತುಂಬು ಮನದಿಂದ


                            -ಫಣೀಶ್ ದುದ್ದ

ಶುಕ್ರವಾರ, ನವೆಂಬರ್ 18, 2016

ರೆಕ್ಕೆ - ಬೇರು


ರೆಕ್ಕೆ - ಬೇರು




ಸುಮಾರು ವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ನಾಗತೀಹಳ್ಳಿ ಚಂದ್ರಶೇಖರ್ ಅವರ ರೆಕ್ಕೆ - ಬೇರು ಎಂಬ ಒಂದು ಅಂಕಣ ಓದಿದ ನೆನಪು. ಈಗಲೂ ಆ ಅಂಕಣ ಪ್ರಕಟವಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ , ನಾನು ಇತ್ತೀಚೆಗೆ ಅದರ ಕಡೆ ಹೆಚ್ಚಾಗಿ ಗಮನ ಕೊಟ್ಟಿಲ್ಲ. ಆದರೆ ಮೊನ್ನೆ ಅವರದೇ ನಿರ್ದೇಶನ ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ರೆಕ್ಕೆ ಬೇರುಗಳ ಕುರಿತಾದ ಪುಟ್ಟ ಚರ್ಚೆ ನೋಡುವಾಗ ಆ ಅಂಕಣ ನೆನಪಿಗೆ ಬಂತು.

ಆ ಅಂಕಣಕ್ಕೆ ರೆಕ್ಕೆ ಬೇರು ಎಂದು ಏಕೆ ಹೆಸರಿಟ್ಟಿದ್ದರು ಎಂದು ಬಹಳ ಯೋಚಿಸುತ್ತಿದ್ದೆ.

ಈ ರೆಕ್ಕೆಗೂ ಬೇರಿಗೂ ಎತ್ತಣಿಂದೆತ್ತ ಸಂಬಂಧ ..?

ರೆಕ್ಕೆ ಇದ್ದಲ್ಲಿ ಬೇರು ಬಿಡಲು ಎಲ್ಲಿ ಸಾಧ್ಯ ..? ಅಥವಾ ಬೇರು ಬಿಟ್ಟರೆ ರೆಕ್ಕೆ ಇದ್ದು ತಾನೆ ಏನು ಪ್ರಯೋಜನ ..?

ಆ ಸಿನಿಮಾವನ್ನು ಹಿಂದೊಮ್ಮೆ ನೋಡಿದ್ದರೂ , ಮೊನ್ನೆ ಮತ್ತೆ ನೋಡಿದಾಗಿನಿಂದ ಆ ಪ್ರಶ್ನೆ ಮನದೊಳಗೆ ಒಂದೇ ಸಮನೆ ಕಾಡುತ್ತಿದೆ.

ಹೌದು , ಮನುಷ್ಯನಿಗೆ ರೆಕ್ಕೆ ಇರಬೇಕಾ ..? ಬೇರು ಇರಬೇಕಾ ..?

ತನಗೆ ರೆಕ್ಕೆ ಇರಬೇಕು , ಹಕ್ಕಿಗಳ ರೀತಿ ಬೆಟ್ಟ , ಗುಡ್ಡ , ನದಿ , ಸಮುದ್ರಗಳ ಮೇಲೆ ಸ್ವಛ್ಛಂದವಾಗಿ ಹಾರಾಡಬೇಕು , ವಿಶಾಲವಾದ ಈ ಪ್ರಪಂಚವನ್ನು ನೋಡಬೇಕು ಎನಿಸುವುದು ಎಷ್ಟು ಸಹಜವೋ , ಇದ್ದ ಜಾಗದಲ್ಲೇ ಆಳವಾಗಿ ಬೇರು ಬಿಟ್ಟು , ಇಲ್ಲೆ ಹೆಮ್ಮರವಾಗಿ ಬೆಳೆಯಬೇಕು , ನಮ್ಮ ಭೂಮಿಯ ರಸವನ್ನು ಹೀರಿ ಇಲ್ಲೇ ಫಲ ಕೊಡಬೇಕು , ಎನಿಸುವುದು ಅಷ್ಟೇ ಸಹಜ .

ಒಮ್ಮೆ ನಿಮಗೆ ನೀವೇ ಈ ಪ್ರಶ್ನೆ ಕೇಳಿ ನೋಡಿ.

ಮನುಷ್ಯನ ಮನಸ್ಸು ಮರ್ಕಟವಿದ್ದಂತೆ, ಒಮ್ಮೆ ಹೀಗನಿಸಿದರೆ, ಇನ್ನೊಮ್ಮೆ ಹಾಗನಿಸುತ್ತದೆ.
ಅದೆಲ್ಲಾ ಅವರವರ ಭಾವಕ್ಕೆ , ಅವರವರ ಭಕುತಿಗೆ ತಕ್ಕಂತೆ, ಜೊತೆಗೆ ಸಮಯಕ್ಕೆ ತಕ್ಕಂತೆ ಕೂಡ.

ಆದರೆ ಈ ರೆಕ್ಕೆ ಕಟ್ಟಿಕೊಂಡು ಎಷ್ಟು ದೂರ ತಾನೆ ಹಾರುವುದಕ್ಕಾಗುತ್ತದೆ ಹೇಳಿ ?.
ಬೇರು ಬಿಡಲಿಲ್ಲವೆಂದರೂ , ಒಂದಲ್ಲಾ ಒಂದು ದಿನ ಗೂಡನ್ನಾದರೂ ಕಟ್ಟಲೇಬೇಕು. ಆಗ ಬೇಕಾಗುವುದು ಆಳವಾಗಿ ಬೇರೂರಿ ಬೆಳೆದಿರುವ ಹೆಮ್ಮರವೇ ಹೊರೆತು , ರೆಕ್ಕೆಗಳಲ್ಲ.

ಈ ರೆಕ್ಕೆಗಳನ್ನು ಕಟ್ಟಿಕೊಂಡು ಅದೆಷ್ಟು ದೂರ ಹಾರುತ್ತೇನೋ ಗೊತ್ತಿಲ್ಲ. ಆದರೆ ರೆಕ್ಕೆ ಕಟ್ಟಿಕೊಂಡು ಹಾರಿ ಬಂದವರಿಗೆ , ಗೂಡು ಕಟ್ಟುವುದಕ್ಕಾದರೂ ಆಳವಾಗಿ ಬೇರು ಬಿಟ್ಟು , ಹೆಮ್ಮರವಾಗಿ ಬೆಳೆಯುವಾಸೆ.

- ಫಣೀಶ್ ದುದ್ದ

ಗುರುವಾರ, ನವೆಂಬರ್ 3, 2016

ಮುಗ್ಧ ಚೇತನ


ಮುಗ್ಧ ಚೇತನ




  ಶುಕ್ರವಾರ ಸಂಜೆ, ಆಗ ತಾನೆ ಆಫೀಸಿನಿಂದ ಮನೆಗೆ   ಬಂದು, "ಅಬ್ಬಾ ನಾಳೆ,ನಾಡಿದ್ದು ರಜೆ"ಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದಂತೆಯೇ ನನ್ನ ಫೋನು ರಿಂಗಣಿಸಿತು, ಯಾವುದೋ ಹೊಸ ನಂಬರ್, ಯಾರಿರಬಹುದು ಎಂದು ಫೋನ್ ರಿಸೀವ್ ಮಾಡಿ "ಹಲೋ.... ಯಾರು ಮಾತಾಡ್ತಾ ಇರೋದು " ಎಂದು ಕೇಳಿದಾಕ್ಷಣ,"ಹಲೋ.... ಅಭಿ ಅಣ್ಣನಾ ಮಾತಾಡ್ತಿರದು??"ಎಂದು ಎಲ್ಲೂ ಕೇಳಿದ ಧ್ವನಿ ಉತ್ತರಿಸಿತು.

"ಹೌದು ನಾನೇ ಮಾತಾಡ್ತಾ ಇರೋದು. ನೀವು ಯಾರು?" ಎಂದೆ.

"ಅಣ್ಣಾ ನಾನು ಚೇತನ್ ..ಗೊತ್ತಾಗ್ಲಿಲ್ವ?? "ಎಂದು ಆ ಪುಟ್ಟ ಧ್ವನಿ ಕೇಳಿತು.

ನಾನು "ಯಾರಿದು .. ಚೇತನ್?" ಎಂದು ಯೋಚಿಸುತ್ತಿರುವಾಗ ಥಟ್ಟನೆ "ಓಹೋ... ನಾನು ಬಾಡಿಗೆಗಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಎರಡನೇ ಕ್ಲಾಸ್ ಹುಡುಗ "ಎಂದು ನೆನಪಾದೊಡನೆ ,
"ಹಾಯ್ ಚೇತನ್ ಹೇಗಿದ್ದೀಯಾ? ಹರ್ಷಿತ,ಶರಣ್ಯ,ಶ್ವೇತ,ದರ್ಶನ್ ಎಲ್ಲರೂ ಹೇಗಿದ್ದಾರೆ " ಎಂದೆ.

"ಚೇತನ್", ನಾನು ವಾಸವಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಮಕ್ಕಳ ಗ್ಯಾಂಗ್ ನ ಲೀಡರ್ ತುಂಟ ಮತ್ತು ಮುಗ್ಧ ಹುಡುಗ.

ಹೀಗೆ ಒಂದು ಶನಿವಾರ ಸಂಜೆ ,ಎಂಟು ಗಂಟೆಗೇ ಊಟ ಮುಗಿಸಿ ಮನೆಗೆ ಬಂದು ಫ್ರೆಶ್ ಆಗಿ, ಕಿವಿಗಳಿಗೆ ಇಯರ್ ಫೋನ್ ಸಿಕ್ಕಿಸಿ,ಹೊರಗಡೆ ಓಡಾಡೋಣವೆಂದು ಹಾಗೆ ಮನೆಯ ಮುಂದೆ ಬಂದು, ಆ ಕಡೆ ,ಈ ಕಡೆ ಓಡಾಡುತ್ತಿರುವಾಗ, ರಸ್ತೆಯ ಆ ಬದಿಯಿಂದ ಒಬ್ಬ ಹುಡುಗ ಜೋರಾಗಿ ಸೈಕಲ್ ಓಡಿಸುತ್ತಾ ಬಂದು ಧಡ್ ಎಂದು ನಮ್ಮ ಮನೆಯ ಬಳಿ ಬಂದು ಬಿದ್ದ.
ತಕ್ಷಣ ಓಡಿ ಹೋಗಿ ಅವನನ್ನು ಹಾಗೂ ಅವನ ಮೇಲೆ ಬಿದ್ದಿದ್ದ ಸೈಕಲ್ಲನ್ನು ಮೇಲಕ್ಕೆತ್ತಿ, " ಏನಾದರೂ ಪೆಟ್ಟಾಯಿತೇ" ಎಂದು ಕೇಳಿದರೆ, "ಏನೂ ಆಗಿಲ್ಲ ಅಣ್ಣಾ ... ಈ ಥರ ಬೇಕಾದಷ್ಟು ಸಲ ಬಿದ್ದಿದ್ದೇನೆ " ಎಂದು ಮುಗ್ಧತೆಯಿಂದ ನಗುತ್ತಾ ಹೇಳಿದ.

ಹಾಗೇ ಮಾತನಾಡುತ್ತಾ ಅವನ ಹೆಸರು, ಸ್ಕೂಲು ಎಲ್ಲಾ ಕೇಳಿದ ಮೇಲೆ " ನಿಮ್ಮ ಮನೆ ಎಲ್ಲಿ? "ಎಂದೆ.

"ಅಯ್ಯೋ ಅಣ್ಣಾ .. ನಾವು ಈ ಬಿಲ್ಡಿಂಗ್ ನಲ್ಲೇ ಇರೋದು, ನೀವು ಯಾವತ್ತೂ ನನ್ನನ್ನು ನೋಡೇ ಇಲ್ವಾ?? " ಎಂದು ಕೇಳಿದ.

"ಇಲ್ಲಪ್ಪ, ನಾನು ಆಫೀಸಿನಿಂದ ಬರುವುದು ರಾತ್ರಿ ತುಂಬ ಹೊತ್ತಾಗುತ್ತೆ, ಹಾಗಾಗಿ ಯಾರನ್ನು ನೋಡಿಲ್ಲ " ಎಂದೆ.
 

"ನೀವು ಆಫೀಸ್ಗೆ ಹೋಗ್ತೀರಾ?? ಏನು ಕೆಲಸ ಮಾಡ್ತೀರಾ?" ಎಂದು ಮತ್ತೊಮ್ಮೆ ಪ್ರಶ್ನೆ ಕೇಳಿದ.

"ನಾನು ಸಾಫ್ಟ್ವೇರ್ ಇಂಜಿನಿಯರ್ "ಎಂದೆ.

" ಹಾಗಂದ್ರೆ..? ಅದೇ ಮನೆ ಕಟ್ಟುಸ್ತಾರಲ್ಲ? ಅವರಾ?? "ಎಂದ ಕೇಳಿದ.

ನಾನು ಮುಗುಳ್ನಕ್ಕು "ಅಲ್ಲಪ್ಪ, ನಿನಗೆ ಈಗ ಅದೆಲ್ಲ ಗೊತ್ತಾಗಲ್ಲ, ನೀನು ದೊಡ್ಡೋನಾದ ಮೇಲೆ ಗೊತ್ತಾಗುತ್ತೆ" , ಎಂದೆ.
"ಹಾಗಾದ್ರೆ ನಾನೂ ದೊಡ್ಡೋನಾದ್ಮೇಲೆ ಅದೇ ಆಗ್ತಿನಿ " ಎಂದ.

ನಾನು ಮತ್ತೊಮ್ಮೆ ಮುಗುಳ್ನಕ್ಕು "ಸರಿ ಈಗ ತುಂಬ ಹೊತ್ತಾಗಿದೆ,ಮನೆಗೆ ಹೋಗಿ ಊಟ ಮಾಡಿ ಮಲಗು " ಎಂದೆ.
ತಕ್ಷಣ "ಅಣ್ಣ ... ನೀವು ನಿಮ್ಮ ಹೆಸರೇ ಹೇಳಲೇ ಇಲ್ವಲ್ಲಾ " ಎಂದ. ನಾನು "ಅಭಿಲಾಷ್" ಎಂದೆ.

ಅದಕ್ಕೆ ಅವನು " ನಾನು ನಿಮ್ಮನ್ನು ಅಭಿ ಅಣ್ಣ ಅಂತ ಕರಿತೀನಿ.. ಓಕೇ ನಾ? " ಎಂದ. ನಾನು "ಸರಿ " ಎಂದೆ.
ಸೈಕಲ್ ನ್ನು ಕಾಂಪೌಂಡ್ ಒಳಗೆ ನಿಲ್ಲಿಸಿ ಮನೆಗೆ ಹೋದ.

ಹೀಗೆ ಪರಿಚಯವಾದ ಹುಡುಗ ಚೇತನ್ .

ಶನಿವಾರ, ಭಾನುವಾರ,ಅಥವಾ ನಾನೇನಾದರೂ ಆಫೀಸಿನಿಂದ ಬೇಗ ಮನೆಗೆ ಬಂದಿದ್ದರೆ ಮಾತನಾಡಲು ಸಿಗುತ್ತಿದ್ದ. ಆ ಮುಗ್ಧ ಮಾತಿಗೆ, ಅವನು ಕೇಳುತ್ತಿದ್ದ ತುಂಟ ಪ್ರಶ್ನೆಗಳಿಗೆ,ನನ್ನಲ್ಲಿ ಉತ್ತರವಿಲ್ಲದೇ ಹೋದರೂ,ಅವನ ಸಮಾಧಾನಕ್ಕೆ ಏನಾದರೊಂದನ್ನು ಹೇಳಿ ಸುಮ್ಮನಾಗುತ್ತಿದ್ದೆ. ಅವನು, ಅವನಷ್ಟೇ ಅಲ್ಲದೆ ನಮ್ಮ ಬಿಲ್ಡಿಂಗ್ ನ ಬೇರೆ ಬೇರೆ ಮಕ್ಕಳನ್ನು ಪರಿಚಯ ಮಾಡಿಸಿ " ಇವರು ಅಭಿ ಅಣ್ಣ ಅಂತ .. ನಮ್ಮ ಫ್ರೆಂಡ್" ಎಂದು ಎಲ್ಲರೂ ಹಾಗೆಯೇ ಕರೆಯಬೇಕು ಎಂದು ಹೇಳುತ್ತಿದ್ದ. ಹೀಗಾಗಿಯೇ ನನಗೆ ಹರ್ಷಿತಾ,ಶರಣ್ಯ ,ಶ್ವೇತ,ದರ್ಶನ್ ಎಲ್ಲರೂ ಪರಿಚಯ ಆಗಿಬಿಟ್ಟಿದ್ದರು. ಎಲ್ಲರೂ ಹೆಚ್ಚು ಕಡಿಮೆ ಅವನ ವಯಸ್ಸಿನವರೇ,ಆ ಬಿಲ್ಡಿಂಗ್ ನಲ್ಲಿ ಅಷ್ಟೊಂದು ಮಕ್ಕಳಿದ್ದಾರೆ ಎಂದು ಅಲ್ಲಿಯವರೆಗೆ ನನಗೆ ಗೊತ್ತೇ ಇರಲಿಲ್ಲ .

ಹೀಗೆ ಅವರೆಲ್ಲ ಪರಿಚಯವಾದ ಕೆಲವೇ ದಿನಗಳೊಳಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಹದಿನೈದು ದಿನ ಆಫೀಸಿಗೆ ರಜೆ ಹಾಕಿ ಊರಿಗೆ ಬಂದೆ,ನಂತರ ಡಾಕ್ಟರ್ ಒಂದು ತಿಂಗಳು ಹೊರಗಡೆ ಊಟ ಮಾಡಬೇಡಿ ಎಂದಿದ್ದರಿಂದ ನನ್ನ ಸಂಬಂಧಿಕರ ಮನೆಯಿಂದ ಆಫೀಸಿಗೆ ಹೋಗಿ ಬರುತ್ತಿದ್ದೆ.

ಶುಕ್ರವಾರ ಸಂಜೆ, ... ಫೋನು ರಿಂಗಣಿಸಿತು....

"ನೀವು ಮನೆಗೆ ಬಂದೇ ಇಲ್ವಲ್ಲಾ, ಓನರ್ ಹತ್ತಿರ ನಿಮ್ಮ ಫೋನ್ ನಂಬರ್ ತಗೊಂಡು, ಹೇಗಿದ್ದೀರಾ? ಅಂತ ಕೇಳಣಾ ಅಂತ ಫೋನ್ ಮಾಡಿದೆ... ನೀವು ಮನೆಗೆ ಬರಲ್ವಾ ಅಣ್ಣ?? "
ಎಂದಾಗ ನನಗೆ ಮಾತೇ ಹೊರಡದಂತಾಯಿತು.......

ಸಂಬಂಧಗಳಿಗೆ ಬೆಲೆಯೇ ಇಲ್ಲದ ಬಾಳ ಪಯಣದಲ್ಲಿ ಎಲ್ಲೆಲ್ಲಿಯ ಮೈತ್ರಿಯ ನಂಟೋ ? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ …?

                                                                                                    -ಫಣೀಶ್ ದುದ್ದ













ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?

ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?

ಕಣ್ಣಂಚಿನಲ್ಲಿ ಹೊರಟು ನಿಂತ ಕಣ್ಣೀರನ್ನೊಮ್ಮೆ ಕೇಳು
ಇಷ್ಟವಿಲ್ಲದಿದ್ದರೂ ಏಕೆ  ಹೊರಟಿರುವೆಯೆಂದು ?

ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?
ಕಾಣುವುದು ಬರಿ ನನ್ನ ಮಬ್ಬಾದ ಪ್ರತಿಬಿಂಬ

ಮಂಜಾಗಿರುವ ಕಣ್ಣನ್ನೊಮ್ಮೆ ಮುಚ್ಚಿ, ಬಿಟ್ಟುಬಿಡು
ಕಣ್ಣೀರು ಹೋಗಲಿ , ನೀ ಮಾತ್ರ ಉಳಿದುಬಿಡು

                                 - ಫಣೀಶ್ ದುದ್ದ

ಭಾನುವಾರ, ಅಕ್ಟೋಬರ್ 23, 2016

ತಿಳಿಯದಾ ದ್ವಂದ್ವದಲಿ ಅಲೆಮಾರಿ ಬಾಳು..

ತಿಳಿಯದಾ ದ್ವಂದ್ವದಲಿ ಅಲೆಮಾರಿ ಬಾಳು...

ಮನಸ್ಸಿಗೆ ಮನಸ್ಸಿನ ಜೊತೆಯೇ ಘೋರ ಯುದ್ದ
ತಿಳಿಯದಾ ದ್ವಂದ್ವದಲಿ ಅಲೆಮಾರಿ ಬಾಳು
ಎದೆಯ ಬಡಿತಕೆ ಹೆದರುತಿದೆ ಪುಕ್ಕಲು ಜೀವ
ಕನಸುಗಳ ಕಾಲು ಕಟ್ಟಿದೆ ಈ ಭೀತಿಯಾ ಭಾವ

                                - ಫಣೀಶ್ ದುದ್ದ

ಗುರುವಾರ, ಅಕ್ಟೋಬರ್ 20, 2016

ಗಡಿಯಾರವೂ ಮರೆತಂತಿದೆ ನಾಚಿಕೆಯ ದಾರಿ...

ಗಡಿಯಾರವೂ ಮರೆತಂತಿದೆ ನಾಚಿಕೆಯ ದಾರಿ...

ಈ ಗಡಿಯಾರಕ್ಕೇನಾಗಿದೆ ? 
ನಾಚಿಗೆಯಿಲ್ಲದೆ ಸುಮ್ಮನೆ ತಿರುಗುತಿದೆ

ಭೂಮಿ, ನಿನಗ್ಯಾರ ಮೇಲೆ ಕೋಪವೇ?
ರವಿಯ ಮೇಲೋ ? ಶಶಿಯ ಮೇಲೋ ?
ರವಿ ಮೂಡಿದರೆ ಶಶಿಯೆಡೆಗೆ ಓಡುವೆ .
ಶಶಿ ನಕ್ಕರೆ ರವಿಯೆಡೆಗೆ ಓಡುವೆ .

ಅದೇನು ಪ್ರೀತಿಯೋ ನಿನಗೆ 
ಹಗಲು ರಾತ್ರಿಯ ಈ ಕಣ್ಣಾಮುಚ್ಚಾಲೆ ಆಟದಲಿ
ನಿನ್ನ ಈ ನಾಚಿಕೆಯಿಲ್ಲದ ಕಳ್ಳಾಟವ ನೋಡಿ
ಗಡಿಯಾರವೂ ಮರೆತಂತಿದೆ ನಾಚಿಕೆಯ ದಾರಿ

ಈ ಗಡಿಯಾರಕ್ಕೇನಾಗಿದೆ ? 
ನಾಚಿಗೆಯಿಲ್ಲದೆ ಸುಮ್ಮನೆ ತಿರುಗುತಿದೆ

               - ಫಣೀಶ್ ದುದ್ದ

ಬುಧವಾರ, ಅಕ್ಟೋಬರ್ 12, 2016

ಹೇಳಿ ಹೋಗು ಕಾರಣ...

ಹೇಳಿ ಹೋಗು ಕಾರಣ...


ಕಣ್ಣಂಚಿನಲ್ಲಿ ನಿಂತ ಹನಿಯು ಹೇಳುತ್ತಿದೆ
ನಾನಿನ್ನು ಹೊರಡುತ್ತೇನೆಂದು,
ಮನಸ್ಸು ಕೇಳುತ್ತಿದೆ ಉಮ್ಮಳಿಸಿ ಬರುತಿರುವ
ದುಃಖವಾ ತಡೆದು,
ಅವಳಂತೂ ಹೇಳಲಿಲ್ಲ , 
ನೀನಾದರು ಹೇಳಿ ಹೋಗು ಕಾರಣವನು, ಹೋಗುವಾ ಮೊದಲು ..!

                    -ಫಣೀಶ್ ದುದ್ದ






ಸೋಮವಾರ, ಅಕ್ಟೋಬರ್ 10, 2016

ಜೊತೆಯಾಗಲು ಬಯಸುತಿದೆ ಮನಸು ಮತ್ತೊಮ್ಮೆ


ಜೊತೆಯಾಗಲು ಬಯಸುತಿದೆ ಮನಸು ಮತ್ತೊಮ್ಮೆ...


ನೀ ಹೋದ ಹೆಜ್ಜೆಯಾ ಜಾಡನ್ನು ಹಿಡಿದು
ಹೆಜ್ಜೆ ಹೆಜ್ಜೆಗೂ ನನ್ನ ಹೆಜ್ಜೆಯನ್ನು ಜೋಡಿಸಿ
ಹುಡುಕುತಿಹೆ ನಿನ್ನನ್ನು ಅರೆಹುಚ್ಚನಂತೆ

ಜೊತೆಯಾಗಲು ಬಯಸುತಿದೆ ಮನಸು ಮತ್ತೊಮ್ಮೆ
ಮಾಸುತಿದೆ ಹೆಜ್ಜೆ ಗುರುತು ಮುಂದೆ ಹೋದಷ್ಟೂ
ನಡೆಯಲಾರೆ ಒಂಟಿಯಾಗಿ ಇನ್ನೆಲ್ಲೂ ಮುಂದೆ
ಕಾಣದಾಗಿದೆ ದಾರಿ ನಡುರಾತ್ರಿಯಲ್ಲಿ

ಬೆಳಕಾಗಿ ಬಾ ನೀನು ಇರುಳನ್ನು ಮನ್ನಿಸಿ
ಹೆಜ್ಜೆಯನ್ನು ಜೋಡಿಸಿ ನನ್ನ ಹೆಜ್ಜೆಯೊಂದಿಗೆ
ನಡೆಯಬೇಕಿದೆ ನಾವು ಜೊತೆಯಾಗಿ ಮುಂದೆ


                                  -ಫಣೀಶ್ ದುದ್ದ

ಹೊಯ್ದಾಡುತ್ತಿದೆ ಮನಸು ...


ಹೊಯ್ದಾಡುತ್ತಿದೆ ಮನಸು ...



ಒಂದು ಬದುಕು, ಇನ್ನೊಂದು ಕನಸು
ಎರಡರ ನಡುವೊಂದು ಸೇತುವೆಯು

ಬದುಕ ತುದಿಯಲಿ ನಿಂತ ಮನಸು
ಹೊಯ್ದಾಡುತ್ತಿದೆ ಸುಮ್ಮನೆ ಬೀಸುವಾ ಗಾಳಿಗೆ
ಬದುಕ ಬಿಟ್ಟು ಕನಸ ಬೆನ್ನೇರಲಾರದೆ
ಕನಸನ್ನು ಮರೆತು ಬದುಕಲೂ ಆಗದೆ

ಬಿರುಗಾಳಿಯ ನಡುವೆ ಕಣ್ಣ್ಮುಚ್ಚಿ ನಿಂತು
ತರಗೆಲೆಗಳ ಜೊತೆ ಸೇತುವೆಯ ದಾಟಿ
ಬದುಕ ತುದಿ ಬಿಟ್ಟು ಕನಸ ತುದಿ ಸೇರಿ
ಕಟ್ಟಬೇಕಿದೆ ಹೊಸದೊಂದು ಬದುಕನು

ಒಂದು ಬದುಕು, ಇನ್ನೊಂದು ಕನಸು
ಎರಡರ ನಡುವೊಂದು ಸೇತುವೆಯು

                               - ಫಣೀಶ್ ದುದ್ದ

ಭಾನುವಾರ, ಅಕ್ಟೋಬರ್ 2, 2016

ನೆನಪುಗಳ ಎಣಿಕೆ...

ನೆನಪುಗಳ ಎಣಿಕೆ ...

ಕನಸಿನೂರಿನ ದಾರಿ ಕಂಡವರು ಯಾರು ?
ನೆನಪ ಬುಟ್ಟಿಯ ಹೊರದೆ ಬಂದವರು ಯಾರು ?
ಬರಿಗೈಯ್ಯ ತುಂಬ ನೆನಪುಗಳ ಎಣಿಕೆ
ಎದೆ ತುಂಬ ತುಂಬಿದೆ ಕನಸುಗಳ ಕವಿತೆ

                       -ಫಣೀಶ್ ದುದ್ದ






ಭಾನುವಾರ, ಸೆಪ್ಟೆಂಬರ್ 25, 2016

ಕನಸಿಗೇ ಜೀವ ತಂದ ಮಗುವು ನೀನು..


ಕನಸಿಗೇ ಜೀವ ತಂದ ಮಗುವು ನೀನು..

ಕನಸಿನಂಗಳದಲ್ಲಿ ಕಂಡ ಪುಟ್ಟ ಕೂಸೊಂದು
ಮನೆಯಂಗಳದಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟಿದೆ
ನೋಡುತಿದೆ ನನ್ನನ್ನೆ ನಸು ನಗೆಯ ಬೀರಿ
ನನ್ನ ಕಣ್ಣುಗಳನ್ನೇ ನಾನು ನಂಬದಂತೆ


ಹುಡುಗಾಟದ ಆಟಿಕೆಯಲ್ಲ ನೀ ನನಗೆ
ಕನಸಿಗೇ ಜೀವ ತಂದ ಮಗುವು ನೀನು
ತಬ್ಬಿ ಎತ್ತಿಕೊಳ್ಳುವೆ ನನ್ನ ತೋಳ ತೆಕ್ಕೆಗೆ
ನಿನ್ನ ಮಿದುವಾದ ಅಂಗಾಲಿಗೊಂದು ಮುತ್ತನಿಟ್ಟು

                                     
                        - ಫಣೀಶ್ ದುದ್ದ

ಮಂಗಳವಾರ, ಸೆಪ್ಟೆಂಬರ್ 20, 2016

ಮೊದಲ ಅಕ್ಷರ ...

ಮೊದಲ ಪುಟ್ಟ ಅಕ್ಷರವೊಂದು ಮುದ್ದಾಗಿ ಮೂಡಿದೆ
ಕನಸುಗಳೇ ತುಂಬಿದ ಖಾಲಿ ಹಾಳೆಯ ಮೇಲೆ
ಕಾದು ನಿಂತಿದೆ ಮನವು ಕನ್ನಡಿಯ ಮುಂದೆ
ತನ್ನ ಪ್ರತಿಬಿಂಬವನ್ನೇ ಗೆರೆಯಾಗಿ ಮೂಡಿಸಲು

               - ಫಣೀಶ್ ದುದ್ದ

ಭಾನುವಾರ, ಸೆಪ್ಟೆಂಬರ್ 11, 2016

ಹಿಂಬಾಲಿಸಿ ಹೊರಟಿರುವೆ ನನ್ನಯ ನೆರಳನೇ...


ಹಿಂಬಾಲಿಸಿ ಹೊರಟಿರುವೆ ನನ್ನಯ ನೆರಳನೇ...

ನೋವು ನಲಿವಿನಾ ನಡುವೆ ನೂರಾರು ಸಾಲುಗಳ
ಗೀಚುತಾ ನಡೆಯುತಿದೆ ನದಿಯಂತೆ ಈ ಜೀವ
ಕಾಡು ಕಣಿವೆಯಾ ದಾಟಿ, ಮೋಹ ಮುನಿಸನು ಮೀಟಿ
ನೆನಪು ಕನಸುಗಳಾ ನಡುವೆ ಮಿಡಿಯುತಿದೆ ಭಾವ

ಹಿಂದಿರುವ ಚಂದಿರನ ಬೆಳದಿಂಗಳಾಟದಿ
ಹಿಂಬಾಲಿಸಿ ಹೊರಟಿರುವೆ ನನ್ನಯಾ ನೆರಳನೇ
ಪುಟವನ್ನು ತಿರುಗಿಸಿ, ಕನಸುಗಳ ಪೋಣಿಸಿ
ಬರೆಯಲು ಹೊಸದೊಂದು ಮುದ್ದಾದ ಸಾಲನು

          - ಫಣೀಶ್ ದುದ್ದ

ಬುಧವಾರ, ಸೆಪ್ಟೆಂಬರ್ 7, 2016

ಕಣ್ತುಂಬಿದ ಪಾತ್ರವದು ಕನಸಲ್ಲೂ ಕಾಡುತಿದೆ ...

ಕಣ್ತುಂಬಿದ ಪಾತ್ರವದು ಕನಸಲ್ಲೂ ಕಾಡುತಿದೆ ...

ಕಣ್ತುಂಬಿದ ಪಾತ್ರವದು ಕನಸಲ್ಲೂ ಕಾಡುತಿದೆ
ಕನವರಿಸುತಿದೆ ಮನಸು ಅಪರೂಪದ  ನಿನ್ನ ಹೆಸರು
ಸೂಸುತಾ ಸೊಗಸಾದ ಬೆಚ್ಚನೆಯ ಬಿಸಿಯುಸಿರು

ಬಿಸಿಯುಸಿರ ತಾಳಕ್ಕೆ ಕಾಲ್ಗೆಜ್ಜೆಯಾ ಕಟ್ಟಿ
ನಡೆಯುತಾ ನೀ ಬಂದು  ನವಿಲಂತೆ ಮೆಲ್ಲಗೆ
ನನ್ನೆದೆಯ ಆವರಿಸು ಕಣ್ಬಿಡುವ ಹೊತ್ತಿಗೆ

ಕಣ್ತುಂಬಿದ ಪಾತ್ರವದು ಕನಸಲ್ಲೂ ಕಾಡುತಿದೆ ...

- ಫಣೀಶ್ ದುದ್ದ

ಶನಿವಾರ, ಸೆಪ್ಟೆಂಬರ್ 3, 2016

ಯಾವ ದೋಣಿಯು ತೇಲಿ ಬರುವುದೋ..?

ಯಾವ ದೋಣಿಯು ತೇಲಿ ಬರುವುದೋ..?

ಕಣ್ತುಂಬ ಕನಸ ಬಿತ್ತಿ , ಆಸೆಗಳ ಅಂಗೈಲಿಟ್ಟು
ನಡೆದು ಬಂದಿದೆ ಜೀವ ನೋವನ್ನು ಸಹಿಸಿ   
ದೂರದೃಷ್ಟಿಯನಿಟ್ಟು ಈ ದಂಡೆಯಲಿ ನಿಂತು
ತೀರ ಸೇರುವಾ ದಾರಿ ಹುಡುಕುತಿದೆ ಮನಸು

ಕಣ್ಮುಚ್ಚಿ ನಿಂತು ಕೈಚಾಚಿ ಸೋತು
ಬಿಕ್ಕಳಿಸಿ ಅಳುತಲಿದೆ ಬಿಸಿಯುಸಿರ ಸೂಸಿ
ಬೀಸುವಾ ಗಾಳಿಯ ಭಾವದ ಜೊತೆ ಸೇರಿ
ಕಣ್ಣೀರು ಹೊರಟಿದೆ ಹುಡುಕುತಾ ದಾರಿ

ಯಾವ ದೋಣಿಯು ತೇಲಿ ಬರುವುದೋ
ನನ್ನ ಮನಸಿನಾ ಅಲೆ ಕೂಗ ಕೇಳುತಾ
ನೀರ ನಡುವಲಿ ಹುಟ್ಟು ಹಾಕುತಾ
ಸೇರಿಸಲು ನನ್ನ ಕನಸ ಊರ ತೀರಕೆ

                  - ಫಣೀಶ್ ದುದ್ದ

ಮಂಗಳವಾರ, ಆಗಸ್ಟ್ 30, 2016

ನನ್ನೆಲ್ಲ ಕವಿತೆಗಳ ಸ್ಪೂರ್ತಿ ನೀನು...


ನನ್ನೆಲ್ಲ ಕವಿತೆಗಳ ಸ್ಪೂರ್ತಿ ನೀನು...


ಮೈ ಮನದ ತುಂಬೆಲ್ಲಾ ಕಾರ್ಮೋಡ ಕವಿದು
ಆಲೋಚಿಸುವ ಶಕ್ತಿ ಇನ್ನಿಲ್ಲವೆಂದು
ಕೈ ಕಟ್ಟಿ ಕುಳಿತಾಗ ಸುಮ್ಮನೆ ಇಂದು
ಮಿಂಚಂತೆ ಹೊಳೆದೆ ಮನದಂಚಿನಲ್ಲಿ
ಪದಗಳಾ ಮಳೆಯನ್ನೇ ಮನದಲ್ಲಿ ಬರಿಸಿ
ಬರಡಾದ ಮನಕ್ಕೆ ಹೊಸಜೀವ ತುಂಬಿ
ತುಂಬಿಸಿದೆ  ಮನವನ್ನು ಪದಪುಂಜದಿಂದ
ಮೊಗೆದಷ್ಟು ಮುಗಿಯದಾ ಸರಕು ನೀನು
ನನ್ನೆಲ್ಲ ಕವಿತೆಗಳ ಸ್ಪೂರ್ತಿ ನೀನು
   
                - ಫಣೀಶ್ ದುದ್ದ

ಕನಸ ಬೆನ್ನೇರಿ ಹೊರಟಿದೆ ಮನಸು

ಕನಸ ಬೆನ್ನೇರಿ ಹೊರಟಿದೆ ಮನಸು..


ಕಣ್ಮುಚ್ಚಿ ಮಲಗಿದ್ದ ಮನಸು ಎದ್ದಿದೆ
ಬೆಂಬಿಡದೆ ಕಾಡುವ ಕನಸಿನಾ ಕೂಗಿಗೆ
ಧ್ವನಿಯ ಅರಸಿ ಬಂದು ಹೆದ್ದಾರಿಯಲಿ ನಿಂತು
ನೋಡುತಿದೆ ನಡುರಾತ್ರಿ ಸರಿಯುವಾ ಬಗೆ ಸುಮ್ಮನೆ

ನಸುನಗುತ ಕನಸು ಕೈ ಬೀಸಿ ಕರೆಯುತಿದೆ
ಚಂದಮಾಮನ ಅಂದ ಮಗುವನ್ನು ಕರೆದಂತೆ
ಕೈ ಚಾಚಿ ನಿಂತಿದೆ ಮಗುವಂತೆ ಮನಸು
ಆಗಸಕೆ ಆಸೆಯ ಏಣಿಯಾ ಹಾಕಿ

ಕನಸ ಬೆನ್ನೇರಿ ಹೊರಟಿದೆ ಮನಸು
ಕಡಿದಾದ ಹಾದಿಯಲಿ ಕಾಲಿಡುತ ಮೆಲ್ಲಗೆ
ಕಾಣಬಹುದೇ ಕಂಡ ಕನಸನ್ನು ನನಸಾಗಿ ?
ಕಾದು ನೋಡಬೇಕಿದೆ ಇರುಳು ಕಳೆದು ಬೆಳಗಾಗುವವರೆಗೆ

                      - ಫಣೀಶ್ ದುದ್ದ

ಗುರುವಾರ, ಆಗಸ್ಟ್ 25, 2016

ಬಿಡದೆ ಕಾಡಿದೆ ಬಹುದಿನದ ಕನಸೊಂದು ..

ಬಿಡದೆ ಕಾಡಿದೆ ಬಹುದಿನದ ಕನಸೊಂದು ..

ಓಡುತಿಹ ಕಾಲವನು ಕಾಲಿಗೆ ಕಟ್ಟಿ 
ಓಡಿ ಬಂದಿಹೆ ನಾನು ಬರಡಾದ ನಾಡಿಗೆ
ಬೆಂಬಿಡದೆ ಕಾಡಿದೆ ಬಹುದಿನದ ಕನಸೊಂದು
ಮರಳಿ ಮಣ್ಣಿಗೇ ಬಂದು ಮರವಾಗಿ ಬೆಳೆದು
ಮನೆಯಾಗಬೇಕಿದೆ ವಲಸೆ ಹಕ್ಕಿಗಳ ಬಾಳಿಗೆ

                               - ಫಣೀಶ್ ದುದ್ದ

ಸೋಮವಾರ, ಆಗಸ್ಟ್ 22, 2016

ಹುಟ್ಟು - ಮರುಹುಟ್ಟು

ಹುಟ್ಟು - ಮರುಹುಟ್ಟು


ಜೀವನದಲ್ಲಿ ಅತ್ಯಮೂಲ್ಯ ಗಳಿಗೆಗಳು ಅಂತಾ ಏನಾದರೂ ಇದ್ದರೆ ಇವೆರಡೇ ಇರಬೇಕು.
ಒಂದು, ತಾಯಿ ಗರ್ಭದಿಂದ ಹೊರಬಂದೊಡನೆ ಮೊಟ್ಟ ಮೊದಲ ಉಸಿರನ್ನು ದೇಹದೊಳಗೆ ಸೇರಿಸುವ ಗಳಿಗೆ.
ಮತ್ತೊಂದು, ಮುಂದೆ ಬದುಕಲು ಇನ್ನ್ಯಾವ ಕಾರಣಗಳೂ ಉಳಿದಿಲ್ಲ ಎನ್ನುವಾಗ , ಒಮ್ಮೆ ಧೀರ್ಘವಾದ ಉಸಿರನ್ನೆಳೆದು, ಅದೇನಾದರೂ ಆಗಲಿ ಬದುಕಿಯೇ ತೀರಬೇಕೆಂದು ಧೃಡ ನಿರ್ಧಾರ ಮಾಡುವ ಘಳಿಗೆ.

ಒಂದು ಹುಟ್ಟು , ಇನ್ನೊಂದು ಮರುಹುಟ್ಟು.


                                                                                   - ಫಣೀಶ್ ದುದ್ದ


ಸೋಮವಾರ, ಜುಲೈ 25, 2016

ಅದೇಕಿಷ್ಟು ಪ್ರೀತಿ ನಿನಗೆ ನನ್ನ ಮೇಲೆ...?

ಅದೇಕಿಷ್ಟು ಪ್ರೀತಿ ನಿನಗೆ ನನ್ನ ಮೇಲೆ...? 


ಬಾಳ ನೌಕೆಯನೇರಿ ಬಹುದೂರದಿಂದ
ಬಂದಿಹೆನು ನಿನ್ನ ತೊಡೆಯಂಗಳಕಿಂದು
ಸಲಹುತಿಹೆ ನನ್ನನ್ನು ಎದೆಗಪ್ಪಿಕೊಂಡು
ಅಮ್ಮನಷ್ಟೇ ಕರುಣೆ  ನಿನ್ನಂತರಾಳದಲಿ
ಅದೇಕಿಷ್ಟು ಪ್ರೀತಿ ನಿನಗೆ ನನ್ನ ಮೇಲೆ?

ಬಾರಿ ಬಾರಿ ನಿನ್ನ ಹೊಟ್ಟೆಯನ್ನೊದ್ದು ಹೋದರೂ
ಕಿಂಚಿತ್ತೂ ನಾಚಿಕೆಯಿಲ್ಲದೆ 
ಮತ್ತೆ ನಿನ್ನ ಮುಂದೆ  ಬಂದು ನಿಂತರೂ
ಬೇಸರವಿಲ್ಲದೆ ಬಾಚಿ ತಬ್ಬಿ, 
ನಿನ್ನ ಮಡಿಲೊಳಗಿಟ್ಟು ಸಾಕಿ
ನನ್ನೊಡಲನ್ನು ತುಂಬಿಸುವ ಓ ಬೆಂಗಳೂರೇ
ಅದೇಕಿಷ್ಟು ಪ್ರೀತಿ ನಿನಗೆ ನನ್ನ ಮೇಲೆ ?

ತಪ್ಪಾಗಿ ಹುಟ್ಟಿದೆನು ಇನ್ನೆಲ್ಲೋ ಈ ಜನ್ಮದಲಿ
ಹುಟ್ಟುವೆನು ಗಿಡವಾಗಿ , ಮರವಾಗಿ , 
ನಿನ್ನ ಮಡಿಲ ಮಣ್ಣಾಗಿ ಮರುಜನ್ಮವಿದ್ದರೆ
ತೀರಿಸುವೆ ನಿನ್ನ ಋಣವ ಮರೆಯದೇ ಮುಂದೆ
ಸಲಹು ಹೀಗೇ ನಾನು ದಡ ಸೇರುವವರೆಗೆ..

ಅದೇಕಿಷ್ಟು ಪ್ರೀತಿ ನಿನಗೆ ನನ್ನ ಮೇಲೆ ?

                              -ಫಣೀಶ್ ದುದ್ದ

ಶುಕ್ರವಾರ, ಜುಲೈ 15, 2016

ಋಣ

ಋಣ

ಮುಗಿಯಿತಿಲ್ಲಿಯ ಋಣ ಕಣ್ಣ್ಮುಚ್ಚಿ ಬಿಟ್ಟಂತೆ
ಮಾಸಿದವು ಮೂರು ಮಾಸ ಕೋಲ್ಮಿಂಚಿನಂತೆ

ಮುಂದೆ ನಡೆಯಲು ಮನ ಮಿಂದು ನಿಂತಿದೆ
ನೆನಪೆಂಬ ಬಟ್ಟೆಯನು ಮೈ ತುಂಬ ಧರಿಸಿ
ಭಾವನೆಗಳ ಆಭರಣದಿ ಸಿಂಗಾರಗೊಂಡು
ಹೊರಟಿದೆ ಬಾಳ ನೌಕೆಯ ಪಯಣ ಅವನಿಷ್ಟದೆಡೆಗೆ..

ಹಿಂತಿರುಗಿ ನೋಡಲು ಕಣ್ತುಂಬಿ ನೀರು
ಹೊಳೆಯಾಗಿ ಹರಿಯುವುದು ಮಿಡಿದ ಮನದೆಡೆಗೆ
ನೆನಪಿನಾ ದೋಣಿಯಲಿ , ಕನಸೆಂಬ ಕೂಸನಿಟ್ಟು
ಹೋಗಲೇಬೇಕು ಮುಂದೆ ಹುಟ್ಟು ಹಾಕಿ
ನಮಗಿಷ್ಟವಿಲ್ಲದಿದ್ದರೂ  ಅವನಿಷ್ಟದೆಡೆಗೆ...

ಮುಗಿಯಿತಿಲ್ಲಿಯ ಋಣ ಕಣ್ಮುಚ್ಚಿ ಬಿಟ್ಟಂತೆ..

                                                - ಫಣೀಶ್ ದುದ್ದ

ಮನಸ್ಸು ನೆಮ್ಮದಿ ಬಯಸುತ್ತಿದೆ



ಮನಸ್ಸು ನೆಮ್ಮದಿ ಬಯಸುತ್ತಿದೆ...

ಮನದ ದುಗುಡಗಳನ್ನೆಲ್ಲ ಒಮ್ಮೆಲೇ
ಮೂಟೆಕಟ್ಟಿ ಮನಸ್ಸಿನಾಚೆ ಎಸೆದು
ಮರೆವಿನ ಮನೆಯನ್ನೊಮ್ಮೆಹೊಕ್ಕರೆ
ಮನಸ್ಸು ನಿರಾಳವಾಗಬಹುದೇನೋ ಏನೋ,
ಅದೇಕೋ ಮರೆವಿಗೂ ನನ್ನ ಮೇಲೆ ಮುನಿಸು
ಮರೆವಿನ ಮನೆಯ ಬಾಗಿಲು ಮುಚ್ಚಿದೆ
ಮನದಂತರಾಳದಿಂದ ನೆನಪಿನ ಬುಗ್ಗೆಗಳು
ಒಂದರ ಹಿಂದೊಂದು ಮೇಲೇಳುತ್ತಿವೆ
ಮನಸ್ಸು ನೆಮ್ಮದಿ ಬಯಸುತ್ತಿದೆ ...

                                - ಫಣೀಶ್ ದುದ್ದ

ಸೋಮವಾರ, ಜುಲೈ 11, 2016

ಮುಕ್ತಿ ಕೊಟ್ಟುಬಿಡು

ಮುಕ್ತಿ ಕೊಟ್ಟುಬಿಡು


ಮೌನ ಮುರಿದು ಮಾತಾಡು
ಮನದ ಮಜಲುಗಳಿಗೆಲ್ಲಾ ಒಮ್ಮೆಲೇ ಮುಕ್ತಿ ಕೊಟ್ಟುಬಿಡು

ನಿನ್ನ ಮಧುರ ಮಾತು ಕೇಳಿ ಅದೆಷ್ಟು ಮಾಸಗಳು ಮಾಸಿ ಹೋದವೋ
ಮೌನವೇ ಮಾತಾಗಿ , ಮಾತು ಮರೆತಂತಾಗಿದೆ

ಮನದ ಗಾಯ ಹುಣ್ಣಾಗುವ ಮೊದಲು
ಮೌನ ಮುರಿದು ಮಾತಾಡು
ಮನದ ಮಜಲುಗಳಿಗೊಮ್ಮೆಲೇ ಮುಕ್ತಿ ಕೊಟ್ಟುಬಿಡು.

                                                                       -ಫಣೀಶ್ ದುದ್ದ