ಮಂಗಳವಾರ, ಏಪ್ರಿಲ್ 18, 2017

ಕಡಲಾಳದ ಕೂಗು

ಕಡಲಾಳದ ಕೂಗು

ಕಡಲ ಗರ್ಭದ ಕರೆಯ ಕೇಳಿ,
ದೂರದೂರಿಂದ ಬರುವ
ಹುಣ್ಣಿಮೆ ಚಂದಿರ,
ಚಂದಿರನ ಮೊಗವ ಕಂಡೊಡನೆ,
ಹುಚ್ಚೆದ್ದು ಕುಣಿಯುವ ಸಾಗರ ,
ಇದೆಂತಾ ಅಚ್ಚರಿ ..!
ಎಲ್ಲಿಯ ಚಂದಿರ ?
ಎಲ್ಲಿಯ ಸಾಗರ ?
ಕಡಲಾಳದ ಕೂಗು
ಕಾಣದೂರಿನ ಚಂದಿರನ
ತಲುಪುವ ಪರಿಯೇ ಸುಂದರ

- ಫಣೀಶ್ ದುದ್ದ

ಜಂಗಮ - ಸ್ಥಾವರ

ಜಂಗಮ - ಸ್ಥಾವರ

ಈ ಜಗವು ಜಂಗಮವೇ ?
ಈ ಜಗಕ್ಕೆ ಅಳಿವಿಲ್ಲವೇ?
ಜಂಗಮಕ್ಕಳಿವಿಲ್ಲ
ಸ್ಥಾವರಕ್ಕಳಿವುಂಟು
ಎನ್ನುವರು ತಿಳಿದವರು ...
ಈ ಜಗದಂತರಾಳದ
ನಿಲುವನ್ನು ಅರಿಯಲು
ಜೋಗಿ ಜಂಗಮನಂತೆ
ಜಗದಗಲವ ಸಂಚರಿಸುವ
ಸಂಚಾರಿಗಲ್ಲದೆ
ಮತ್ತಿನ್ಯಾರಿಗಾದರೂ
ಸಾಧ್ಯವಿದೆಯೇ ...?

- ಫಣೀಶ್ ದುದ್ದ

ಸೋಮವಾರ, ಏಪ್ರಿಲ್ 3, 2017

ಸಂಭ್ರಮ

ಸಂಭ್ರಮ

ಬಿರುಕುಬಿಟ್ಟ ಬರಡು ಭೂಮಿಯ ಮಧ್ಯೆ,
ಆಕಾಶವನ್ನೇ ದಿಟ್ಟಿಸುತ ಆತಂಕದಿ
ಕೂತಿರುವ ರೈತನ,
ಅಹವಾಲನ್ನು ಕೇಳಲು
ಮಳೆರಾಯನೇ ಧರೆಗಿಳಿಯಲು,
ಬಡ ರೈತನ ಮುಖದಲ್ಲಿ
ಸಂಭ್ರಮವೋ ಸಂಭ್ರಮ.

- ಫಣೀಶ್ ದುದ್ದ

ಆ ತೇರು ...

ಆ ತೇರು ...
 
ಅದೊಂದು ಕಾಲವಿತ್ತು ,
ಉಗಾದಿ ಹಬ್ಬದಾ ಮುನ್ನ
ನಮ್ಮೂರ ತೇರು,
ಊರಿನಾ ತರುಣರೆಲ್ಲ ಸೇರಿ
ಕಟ್ಟುತ್ತಿದ್ದರು ತೇರ ಜೋರು,
ಹಣ್ಣು ಜವನದಾ ಜೋಡಿ
ನವಜೋಡಿ ಕೈಯ್ಯಲ್ಲಿ
ಸಂಭ್ರಮವೋ ಸಂಭ್ರಮ,
ಊರ ಮನೆಮಂದಿಯಲ್ಲಿ

ಈಗಲೂ ನಡೆಯುವುದು
ಊರಿನಾ ಜಾತ್ರೆ,
ಟರ ಟರ ಸದ್ದಿನ
ಟ್ರ್ಯಾಕ್ಟರಿನ ತೇರಲ್ಲಿ,
ಗಾಲಿ ಮುರಿದಾ ತೇರು
ಊರಿನಾ ಮುಂದೆ,
ತಾರುಣ್ಯ ಓಡುತಿದೆ
ನಗರದಾ ಹಿಂದೆ,
ನವಜೋಡಿ ಮರೆತಿದೆ
ಹಣ್ಣು ಜವನದಾ ಹಿಗ್ಗು,
ತೇರಿನಾ ಸಂಭ್ರಮ
ಉಳಿದ ಮುದುಕರಾ ಮುಂದೆ.

- ಫಣೀಶ್ ದುದ್ದ

ಯುಗಾದಿ

ಯುಗಾದಿ
 
ಬೆಲ್ಲದಾ ಜೊತೆಗೂಡಿ ಬೇವಿನಾ ಹೂವು 
ಬಂದು ನಿಂತಿದೆ ಬಾಗಿಲಾ ಬಳಿಗೆ,
ರಂಗೋಲಿ ಬರೆದು,ತೋರಣವ ಕಟ್ಟಿ,
ಬರಮಾಡಿಕೊಳ್ಳಲು ಹೊಸಯುಗದ ಬೆಳಗನ್ನು ,
ವಿಳಂಬಿಸದಿರು ಓ ರವಿಯೆ,
ಕರೆದು ತಾ ನೀ ಬೇಗ,ಕೈಹಿಡಿದು ನಿನ್ನೊಡನೆ
ಹೇವಿಳಂಬಿ ಸಂವತ್ಸರವನು,
ತೋರಿಸಬೇಕಿದೆ ನಮ್ಮ ಮನೆಯ ಮಾವಿನಾ ಚಿಗುರನು.
 
-ಫಣೀಶ್ ದುದ್ದ