ಶುಕ್ರವಾರ, ಜನವರಿ 13, 2017

ಇದುವೆ ಸಂಕ್ರಮಣ ...


ಇದುವೆ ಸಂಕ್ರಮಣ ...

ಬಾನ ದಾರಿಯಲಿ ಭಾರ್ಗವನ ಹೆಜ್ಜೆ
ಬದಲಾಗುತಿರಲು ಉತ್ತರೆಯ ಕಡೆಗೆ
ಭೂರಮೆಯ ಅಂಗಳದಿ ಹೆಚ್ಚಿದೆ ಬೆಳಕು
ಬೆಳಕಿನಾ ಹೊಳಪಿಗೆ ಜಗದೆಲ್ಲೆಡೆ ಸುಗ್ಗಿ
ಇದುವೆ ಸಂಕ್ರಮಣ ...

ಮೌನದಿ ಮಾಸುತಾ ಮಾಗಿಯಾ ಕಾಲ
ಮೆಲ್ಲನೆ ಕರಗುತಿದೆ ಮನಸಿನಾ ಮಂಜು
ಕರಿ ಮೋಡ ದಾಟುತಾ ಸೂರ್ಯನಾ ರಶ್ಮಿ
ಹೊಸ ಚೆಲುವ ತಂದಿದೆ ಕಾಮನಾಬಿಲ್ಲು
ಇದುವೆ ಸಂಕ್ರಮಣ ...

ಹಳೆ ನೋವ ಕಳೆದು ಹೊಸ ಭಾವ ತಳೆದು
ಮೂಡಲಿ ಮನೆ ಮನದಿ ಹೊಸತನದ ಕಾಂತಿ
ಭಾಸ್ಕರನ ಹಾದಿಯಲಿ ಉತ್ತರೆಯ ರಂಗೋಲಿ
ರಂಗನ್ನು ತರಲಿ ಈ ಮಕರ ಸಂಕ್ರಾಂತಿ
ಇದುವೆ ಸಂಕ್ರಮಣ ...


                    - ಫಣೀಶ್ ದುದ್ದ

ಶನಿವಾರ, ಜನವರಿ 7, 2017

ಭಾವನೆಗಳ ಸುಳಿಯಲ್ಲಿ...


ಭಾವನೆಗಳ ಸುಳಿಯಲ್ಲಿ...

ಭಾವನೆಗಳ ಸುಳಿಯಲ್ಲಿ ಬದುಕಿನಾ ಹಾಯಿದೋಣಿ
ದೂರದಾ ತೀರದಲಿ ಕನಸಿನಾ ಕೂಸುಮರಿ
ಮೊರೆಯುವಾ ಕಡಲಿನಲಿ ಮುಳುಗುವಾ ದಿಗಿಲು
ಕಾಣದಾ ತೀರವನು ಸೇರುವಾ ತವಕ

               - ಫಣೀಶ್ ದುದ್ದ

ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ಇಳಿ ಸಂಜೆ ಕಳೆದು ನಡುರಾತ್ರಿ ಸರಿದು
ಬೆಳಕಾಗಿ ಹುಟ್ಟುವುದು ನೀ ಹುಟ್ಟಿದಾ ದಿನ
ಹೊಂಗಿರಣ ಧರೆಯನ್ನು ಮುತ್ತಿಡುವ ಮುನ್ನ
ತಿಳಿಸಬೇಕಿದೆ ನಿನಗೆ ಪುಟ್ಟ ಶುಭಾಶಯವೊಂದ

ಬಣ್ಣದಾಟವ ಮುಗಿಸಿ ಬಾನಂಚಿನಲ್ಲಿ ನಿಂತ
ರವಿಯನ್ನು ಕೇಳಿದೆ ತಿಳಿಸೆನ್ನ ಶುಭಾಶಯವ
ತಾರುಣ್ಯ ಗೀತೆಯ ತಾಳ ತಿಳಿಯದೆನಗೆಂದು
ತಿರುಗಿ ನೋಡದೇ ಇಳಿದ ಅಬ್ದಿಯಾ ಒಳಗೆ

ನಗೆಮೊಗದ ಚಂದಿರ ನಗುನಗುತ ಬಂದ
ನಾಚುತಲಿ ನಸುನಗುವ ತಾರೆಗಳ ನಡುವೆ
ಚೆಂದದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಕೇಳಿದೊಡೆ ಮರೆಯಾದ ಮೋಡಗಳ ಹಿಂದೆ

ಇರುಳನ್ನು ಮುರಿದು ಮುಂಜಾವು ಹರಿದು
ಮೂಡಿತು ಮುದ್ದಾದ ಮಂಜಿನಾ ಹನಿಯು
ಮೌನದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಜಾರಿತು ಜೀಕುತ ಹನಿಯೊಡೆದು ನೀರಾಗಿ

ಮರುಮಾತು ಮೂಡದೇ ಮೌನದಿ ಕುಳಿತಾಗ
ಹೊರಟಿತು ತಂಗಾಳಿ ಶುಭಾಶಯವ ಕೋರಿ
ಅರಸುತಿದೆ ಮನಸು ಗಾಳಿ ಹೆಜ್ಜೆಯಾ ಹಾದಿ 
ತಿಳಿಯದಾಗಿದೆ ನಿನ್ನ ತಲುಪುವಾ ದಾರಿ


                                   - ಫಣೀಶ್ ದುದ್ದ

ಬುಧವಾರ, ಜನವರಿ 4, 2017

ಕಲ್ಲು ಮಂಟಪ

 ಕಲ್ಲು ಮಂಟಪ


“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ..?
ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯಲ್ಲಿ ಸಿಕ್ಕಿದ್ದು ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ ಮಂಟಪದ ಕಂಬಕ್ಕೊರಗಿ ಕೂರೋ ದರ್ದಾದರೂ ನನಗೆ ಏನಿತ್ತು..?"
ಮೇಲೆ ನಾಲ್ಕು ಗುಡ್ಡ ಹತ್ತಿದರೆ ಶೇಷ ಪರ್ವತ, ಇನ್ನೂ ಮುಂದಕ್ಕೆ ಕುಮಾರ ಪರ್ವತ, ಎಡಗಡೆಗೆ ನೋಡಿದಷ್ಟುದ್ದಕ್ಕೂ ಪರ್ವತಗಳ ಸಾಲು, ಬಲಗಡೆಗೆ ನಾಲ್ಕು ಗುಡ್ಡ ಹತ್ತಿ, ಇಳಿದರೆ ಈ ಗುಡ್ಡಗಳು ಮತ್ತು ಕಾಡನ್ನು ಬೇರ್ಪಡಿಸುವ ಭಟ್ಟರ ಒಂಟಿ ಮನೆ. ಇವೆಲ್ಲದರ ನಡುವೆ ಒಂಟಿಯಾಗಿ ನಿಂತಿರುವ ಕಲ್ಲು ಮಂಟಪ.
"ಮನೆಯ ಎಲ್ಲಾ ಸುಖ, ನೆಮ್ಮದಿಗಳನ್ನು ಬಿಟ್ಟು, ಇಲ್ಲಿ ಬಂದು ಈ ಕಂಬಕ್ಕೊರಗಬೇಕಾಗಿತ್ತಾ..?
ಒಂದೆರಡು ಬಾರಿಯಾದರೆ ಸರಿ, ಅದೆಷ್ಟು ಬಾರಿ... ಲೆಕ್ಕವಿಲ್ಲದಷ್ಟು... ದಿನಗಟ್ಟಲೇ.. ಒಮ್ಮೊಮ್ಮೆ ವಾರಗಟ್ಟಲೆ...”
"ಅದೇಕೆ ಇಲ್ಲಿಗೆ ಬರಲು ಪ್ರಾರಂಭ ಮಾಡಿದೆ ಎಂದು ಮಾತ್ರ ಗೊತ್ತಿಲ್ಲ, ಆದರೆ ಈ ಕಲ್ಲು ಮಂಟಪದ ಕಂಬಕ್ಕೊರಗಿ, ಒಂದು ನಿಮಿಷ ಕಣ್ಣು ಮುಚ್ಚಿದರೆ ಸಾಕು, ಮನಸ್ಸಿಗೆ ಅದೆಂತಾ ನೆಮ್ಮದಿ. ಮನಸ್ಸಿನಲ್ಲಿ ಅದೆಷ್ಟು ತಳಮಳವಿದ್ದರೂ, ಅದೇನು ಮಾಯೆಯೋ, ಇಲ್ಲಿಗೆ ಬಂದೊಡನೆ ಪ್ರಶಾಂತವಾಗಿಬಿಡುತ್ತಿತ್ತು. ಮೊದಲೆರಡು ಬಾರಿ ಪೂರ್ತಿಯಾಗಿ ಕುಮಾರ ಪರ್ವತದ ತುದಿಯವರೆಗೂ ಹತ್ತಿದ್ದು ಬಿಟ್ಟರೆ, ಆ ನಂತರ ಇಲ್ಲಿಂದ ಮುಂದೆ ಹೋಗಲೇ ಇಲ್ಲ... “
"ಈಗ ಅನ್ನಿಸುತ್ತಿದೆ, ಅಂದು ನಾನು ಇಲ್ಲಿಗೆ ಬರದೇ ಹೋಗಿದ್ದಿದ್ದರೇ ಚೆನ್ನಾಗಿರುತ್ತಿತ್ತೇನೋ...”
"ಇಲ್ಲೇ ತಾನೇ ಅವಳು ನನಗೆ ಸಿಕ್ಕಿದ್ದು, ಇದೇ ಕಲ್ಲು ಮಂಟಪದ ಕಂಬಕ್ಕೊರಗಿದ್ದಾಗಲೇ ತಾನೆ ಅವಳು ಏದುಸಿರು ಬಿಡುತ್ತಾ ಬಂದು, ನನ್ನ ಇರುವಿಕೆಯನ್ನು ಗಮನಿಸದೇ, ಕಂಬದ ಇನ್ನೊಂದು ಬದಿಗೊರಗಿದ್ದು, ಆ ತಂಪಾದ ಗಾಳಿಗೆ, ಅವಳ ಕೂದಲು ನನ್ನ ಮುಖಕ್ಕೆ ಕಚಗುಳಿಯಿಟ್ಟಿದ್ದು, ಹೆಸರಿಗೆ ತಕ್ಕ ಬಿಳಿ ಮೈಬಣ್ಣ , ಎಂತಹವರನ್ನು ಮೋಡಿ ಮಾಡುವ ಕೆನ್ನೆಗುಳಿ ಮುಖ.... ಅವತ್ತೇ ಅಲ್ಲವೇ ನನ್ನ ನೆಮ್ಮದಿ ಕವಲೊಡಿದಿದ್ದು .. ಶಾಂತ ಸರೋವರದಂತಿದ್ದ ನನ್ನ ಮನಸ್ಸಿನಲ್ಲಿ ಪ್ರೀತಿಯ ಅಲೆ ಮೂಡಿದ್ದು ..”.

"ಎಷ್ಟೋ ವರ್ಷದ ಹಿಂದೆ ಕುಮಾರ ಪರ್ವತದ ತುದಿಯವರೆಗೂ ಹೋದ ನಾನು , ಅಂದು ಮಂತ್ರಮುಗ್ದನಾಗಿ ಅವಳ ಹಿಂದೆ ಹೋಗಿದ್ದೆ. ಅವಳು ಚಾರಣಕ್ಕೆ ಬಂದವಳು. ಯಾವ ಚಾರಣಿಗರೊಂದಿಗೂ ಮಾತನಾಡದ ನಾನು ಅಂದು ನಾನೇ ಅವಳ ಜೊತೆ ಮಾತನಾಡಲು ಪ್ರಾರಂಭಿಸಿದೆ. ಶೇಷ ಪರ್ವತದ ತುದಿಯಲ್ಲಿ ಮೋಡಗಳ ನಡುವೆ ನಿಂತು "ಹಾಯ್", ಎಂದು ಶುರುವಾದ ಗೆಳೆತನ, ಕುಮಾರ ಪರ್ವತವನ್ನು ಹತ್ತಿ , ಮತ್ತೆ ಕಲ್ಲು ಮಂಟಪದ ಬಳಿ ಬರುವುದರೊಳಗೆ, ನಾನು ನನ್ನ ಮನಸ್ಸನ್ನು ಅವಳಿಗೆ ಕೊಟ್ಟಿದ್ದೆ, ಅವಳ ಫೋನ್ ನಂಬರ್ ನ್ನು ನನಗೆ ಕೊಟ್ಟಿದ್ದಳು.”

"ಮುಂದೆ ಇದೇ ಗೆಳೆತನ ಪ್ರೀತಿಯಾಗಿ ಬೆಳೆಯಲು ಹೆಚ್ಚೇನು ಸಮಯ ಬೇಕಾಗಲಿಲ್ಲ, ನನ್ನ ಈ ಹುಚ್ಚಾಟಗಳಿಗೆ ಅವಳನ್ನು ಪಾಲುಗಾರ್ತಿಯನ್ನಾಗಿ ಮಾಡಿಕೊಂಡು , ಮತ್ತೊಮ್ಮೆ ಅವಳನ್ನು ಇದೇ ಕಾಡು ಅಲೆಸಿ , ಒಮ್ಮೆ ಅವಳು ತಲೆ ನೋವೆಂದದ್ದಕ್ಕೆ ಭಟ್ಟರ ಮನೆಯಲ್ಲಿ ಕಷಾಯ ಮಾಡಿಸಿಕೊಟ್ಟು , ಇದೇ ಕಲ್ಲು ಮಂಟಪದ ಕಂಬಕ್ಕೊರಗಿ , ನಾನು ಪೂರ್ವದ ದಿಗಂತವನ್ನು ನೋಡುತ್ತಾ , ಅವಳು ದಕ್ಷಿಣದ ಪರ್ವತ ಶ್ರೇಣಿಗಳನ್ನು ನೋಡುತ್ತಾ , ನಮ್ಮ ಜೀವನದ ಕನಸು ಕಟ್ಟಿದ್ದು. ನನ್ನ ಹೆಸರನ್ನು ಅವಳು , ಅವಳ ಹೆಸರನ್ನು ನಾನು , ಅದೆಷ್ಟು ಬಾರಿ ಕೂಗಿ , ಈ ಪರ್ವತ ರಾಶಿಗಳ ಮಧ್ಯೆ ಅದರ ಪ್ರತಿ ಧ್ವನಿಯನ್ನು ಕೇಳಿದ್ದು".

"ಅವತ್ತೇ ನನ್ನ ಪ್ರಶಾಂತವಾದ ಮನಸ್ಸಿನಲ್ಲಿ ಆ ಪ್ರತಿಧ್ವನಿಯ ಅಲೆಗಳ ಅಬ್ಭರ ಹೆಚ್ಚಾದ ಸುಳಿವು ಸಿಕ್ಕಿತ್ತು".

" ಮುಂದೆ , ಮತ್ತೆ ಮತ್ತೆ ಮನಸ್ಸಿನ ತಲ್ಲಣ ಹೆಚ್ಚುತ್ತಲೇ ಹೋಯಿತು. ಆದರೆ ಅಂದು ಮಾತ್ರ , ಅದೇನಾಯಿತೋ ... ಅಂದು ಇದ್ದಕ್ಕಿದ್ದಂತೆ ಇಲ್ಲಿಗೆ ಹೊರಟೆ , ಎಂದೂ ಬೇಡವೆನ್ನದಿದ್ದ ಅಮ್ಮ , ಅಂದು ಅದೆಷ್ಟು ಬೇಡವೆಂದರೂ ಇಲ್ಲಿಗೆ ಬಂದೆ , ನನ್ನವಳನ್ನೂ ಕರೆದೆ , ಮತ್ತೆ ತಲೆ ನೋವು ಹೆಚ್ಚಾಗಿದೆಯೆಂದು ಬರುವುದಿಲ್ಲವೆಂದಳು".

"ಆದರೆ , ಮೊದಲ ಬಾರಿ ಬಂದು ಕಂಬಕ್ಕೊರಗಿ ಪ್ರಶಾಂತವಾಗಿ ಕುಳಿತಂತೆ ಅಂದು ಕುಳಿತುಕೊಳ್ಳಲಾಗಲಿಲ್ಲ.”
" ಸರೋವರ ಸಮುದ್ರದಂತಾಗಿ , ಅಲೆಗಳು ತೀರದ ಬಂಡೆಗಪ್ಪಳಿಸಿದ್ದವು. ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಅದೇಕೋ ಒಂದು ನಿಮಿಷವೂ ಅಲ್ಲಿರಲಾಗಲಿಲ್ಲ, ಹೊರಟೇಬಿಟ್ಟೆ".

"ಅವಳ ಸಣ್ಣ ತಲೆನೋವು ಕೇವಲ ತಲೆನೋವಾಗಿ ಉಳಿದಿರಲಿಲ್ಲ. ಮೆದುಳಿನ ಜ್ವರವಾಗಿ ಅವಳನ್ನೇ ಆಹುತಿ ತೆಗೆದುಕೊಂಡಿತ್ತು".
"ಅಂದು ಪರ್ವತ ರಾಶಿಗಳ ಮಧ್ಯೆ ಕೇಳಿದ ಅವಳ ಪ್ರತಿಧ್ವನಿ ಕ಼ೀಣಿಸಿತ್ತು".

"ಶಾಂತ ಸರೋವರದಂತಿದ್ದ ಮನಸ್ಸನ್ನು , ಇನ್ನೊಂದು ಶಾಂತವಾಗದಂತೆ ಮಾಡಿ ಹೋಗಿದ್ದಳು”.

"ಈಗ ಮತ್ತದೇ ನೆಮ್ಮದಿಯನ್ನು ಹುಡುಕುತ್ತಾ , ಈ ಕಂಬಕ್ಕೊರಗಿ ಕುಳಿತಿದ್ದೇನೆ... “

ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಕಡಲು ಭೋರ್ಗರೆಯುತ್ತಿದೆ. ಇವೆಲ್ಲವನ್ನು ನೋಡುತ್ತಾ ಶಾಂತವಾಗಿ ನಿರ್ಲಿಪ್ತತೆಯಿಂದ ನಿಂತಿದೆ ಕಲ್ಲು ಮಂಟಪ.


- ಫಣೀಶ್ ದುದ್ದ

ಮೌನದಾ ಮಾತು...



ಮೌನದಾ ಮಾತು...


ಮೌನ ತುಂಬಿದ ಮನದಿ ಮುಗಿಯದಾ ಮಾತು
ಕಾಡುವಾ ಕನಸುಗಳ ಜೊತೆ ಮಾಸದಾ ನೆನಪುಗಳು
ಅನಿಸಿದ್ದೆಲ್ಲವ ಬಿಡದೆ ಬರೆಯುವಾ ಬಯಕೆ
ಬರವಣಿಗೆಯ ಮರೆಸುತಿದೆ ಲೇಖನಿಯ ಮುನಿಸು
ಬರೆಯದೇ ಉಳಿದಿದೆ ಆ ಮೌನದಾ ಮಾತು


                        - ಫಣೀಶ್ ದುದ್ದ