ಗುರುವಾರ, ಮೇ 11, 2017

ಮನಸ್ಥಿತಿ ..

 ಮನಸ್ಥಿತಿ ..

ಅದೆಷ್ಟು ಸಜ್ಜನಿಕೆ ತುಂಬಿದ್ದರೇನು
ಈ ಜಗದ ಒಡಲೊಳಗೆ?,
ಕೆಲವು ಮನಸ್ಥಿತಿಗಳೇ ಹಾಗೆ,
ಮನುಷ್ಯತ್ವವನ್ನು ಮೂಟೆಕಟ್ಟಿ,
ಆತ್ಮಸಾಕ್ಷಿಯನ್ನು ಆಚೆಗಟ್ಟಿ,
ಮಾಡಬಾರದ್ದನ್ನು ಮಾಡುತ್ತಾ,
ದ್ವೇಷದ ವಿಷ ಕಾರುತ್ತಾ,
ಮೆರೆಯುತ್ತಲೇ ಇರುತ್ತವೆ
ಆ ಮತಿಭ್ರಮಣ ಮನಸ್ಸುಗಳು



-ಫಣೀಶ್ ದುದ್ದ

ಎರಡಕ್ಷರದ ಶಕ್ತಿ

ಎರಡಕ್ಷರದ ಶಕ್ತಿ

ಎರಡಕ್ಷರದ ಶಕ್ತಿ,
ಏನ ಬರೆಯಲಿ ನಾನು
ನಿನ್ನ ಬಗ್ಗೆ ?
ಬರೆದರೆ ಪುಟಗಳೇ ಸಾಲದು,
ಅಸಲಿಗೆ ಈ ಜನುಮವೇ ಸಾಲದು,
ಸಾಧ್ಯವಿಲ್ಲ ತಾಯಿ ನಿನ್ನ ಬಗ್ಗೆ ಹೇಳಲು,
ನಾ ಒಲ್ಲೆ , ನಿನ್ನ ಪದಗಳಲಿ ಬಂದಿಸಲು,
ಹೇಳಬಲ್ಲೆ ನಾನು ಇಷ್ಟು ಮಾತ್ರವೆ ಇಂದು,
ಕುಳಿತರೆ ನನ್ನೆಲ್ಲ ಶಬ್ದಕೋಶದ ಪದಗಳು
ತೂಗು ತಕ್ಕಡಿಯ ಒಂದು ತುದಿಯಲಿ,
ನೀ ಕುಳಿತ ತುದಿಯ ತೂಕವೇ ಏರುವುದು,
ಅಮ್ಮ ಎಂಬ ಪದವೇ
ಸಕಲವನು ಮೀರುವುದು.


 - ಫಣೀಶ್ ದುದ್ದ

ಅನರ್ಥ ಅಪಾರ್ಥ

ಅನರ್ಥ ಅಪಾರ್ಥ

ಪ್ರತ್ಯಕ್ಷವಾಗಿ ನೋಡಿದರೂ
ಪ್ರಾಮಾಣಿಸಿ ನೋಡೆನ್ನುವರು,
ಅನರ್ಥ ಅಪಾರ್ಥಗಳೇ
ಸುಳಿದಾಡುತ್ತಿರುವ
ಈ ಗಲ್ಲಿಯೊಳಗೆ
ಪ್ರಾಮಾಣಿಕತೆಯೆಲ್ಲಿ?
ಮರದಡಿ ಮಜ್ಜಿಗೆ ಕುಡಿದರೂ,
ಹೆಂಡ ಕುಡಿವನೆನ್ನುವರು...
ಮನದಾಳದ ನೋವಿನ ಅಳಲಿಗೂ
ಮೊಸಳೆ ಕಣ್ಣೀರೆನ್ನುವರು..
ಅನರ್ಥ ಅಪಾರ್ಥಗಳೆಂಬ
ಭೂತಗಳ ಕಾಲಡಿಯಲಿ
ಸಿಕ್ಕಿ ಸಾಯುತ್ತಿದೆ
ನಿಯತ್ತೆಂಬ ಬಡ ಜೀವ,
ಎದ್ದು ಬರಬೇಕಿದೆ ಬಿದ್ದ ನಿಯತ್ತು
ಬುದ್ದಿ ಕಲಿಸಲು ಒಮ್ಮೆ
ಈ ಬುದ್ದಿ ಭ್ರಮಣ ಅನರ್ಥಗಳಿಗೆ.


- ಫಣೀಶ್ ದುದ್ದ

ಬಂದುಬಿಡು ನಲ್ಲೆ

ಬಂದುಬಿಡು ನಲ್ಲೆ

ನೋಡಿಯೂ ನೋಡದ ಹಾಗಿದ್ದ
ಆ ನಿನ್ನ ಓರೆಗಣ್ಣ ನೋಟ,
ಕಾಡಿಗೆ ಇಟ್ಟ ಆ ನಿನ್ನ ಕಂಗಳು,
ಕಣ್ಣ ರೆಪ್ಪೆಗೆ ಮುತ್ತಿಡುವ ಮುಂಗುರುಳು,
ಕನಸಲ್ಲೂ ಕಾಡುವ ನಿನ್ನ ಅಂದ ,
ಬಂದುಬಿಡು ನಲ್ಲೆ,
ಕಾಡ ಬೆಳದಿಂಗಳಲ್ಲಿ
ಅವನಂದವೇ ಚಂದ ಎಂದು
ಮೆರೆಯುವ ಚಂದಮಾಮನಿಗೊಮ್ಮೆ
ನಿನ್ನ ತೋರಿಸಬೇಕಿದೆ.

- ಫಣೀಶ್ ದುದ್ದ

ಶ್ರಮ

ಶ್ರಮ

ಶ್ರಮವನ್ನು ಹೀರಿ
ಬೆಳೆದ ಮರ,
ಕೊಡುತಿಹುದು
ಫಲವತೆಯ ಹಣ್ಣು,
ಹಣ್ಣ ತಿಂದವರು
ಕೊಡದಿರಲಿ
ಆ ಮರಕೆ,
ಕೊಡಲಿಯೇಟಿನ ಪೆಟ್ಟು !


- ಫಣೀಶ್ ದುದ್ದ