ಬುಧವಾರ, ಸೆಪ್ಟೆಂಬರ್ 20, 2017

ಕವಿತೆ ಹುಟ್ಟುವುದೇನು ?

ಕವಿತೆ ಹುಟ್ಟುವುದೇನು ?

ಎಂದೋ ಅಪರಾತ್ರಿಯಲ್ಲಿ ಕುಳಿತು
ಅರ್ಧಂಬರ್ಧ ಬರೆದ ಕವಿತೆಯ ಸಾಲುಗಳು
ಮತ್ತೆ ಮತ್ತೆ ಪೀಡಿಸುತ್ತಿವೆ
ನಮಗೆ ಮುಕ್ತಿ ಕೊಟ್ಟು ಬಿಡೆಂದು...

 
ಅಟ್ಟದ ಮೇಲೆ ಗೆದ್ದಲು ಹತ್ತಿದ ಪುಸ್ತಕವೊಂದು
ತನ್ನನ್ನು ತಾನೇ ಓದುತ್ತಿದೆ ,
ಮುಗಿಯದ ಕಥೆಯೊಂದನ್ನು
ಮತ್ತೆ ಮತ್ತೆ ನೆನಪಿಸುತ್ತಿದೆ.

 
ಮುನಿದು ಮೂಲೆಯಲಿ ಬಿದ್ದ
ಲೇಖನಿಯ ಶಾಯಿ ಮುಗಿದು
ಅದೆಷ್ಟು ಮಾಸವಾಯಿತೋ ...
ಕವಿತೆ ಹುಟ್ಟಿ ಅದ್ಯಾವ ಕಾಲವಾಯಿತೋ ...

 
ಖಾಲಿಹಾಳೆಯ ಪ್ರೀತಿ ಲೇಖನಿಯ ಕಡೆಗೆ
ಇದ್ದರಲ್ಲವೆ ತಾನೆ ಕವಿತೆ ಹುಟ್ಟುವುದಿಲ್ಲಿ ,
ಶಾಯಿಯಿದ್ದರೆ ಏನು .. ಪ್ರೀತಿ ಇಲ್ಲದ ಮೇಲೆ
ಕನಸು ಅರಳುವುದೇನು ? ಕವಿತೆ ಹುಟ್ಟುವುದೇನು ?

 
-ಫಣೀಶ್ ದುದ್ದ

ನಿನ್ನದೊಂದೇ ನೆನಪು

 ನಿನ್ನದೊಂದೇ ನೆನಪು..
 
ಖಾಲಿ ಹಾಳೆ, ಬಿಳಿಯ ಗೋಡೆ
ಶಾಯಿ ತುಂಬಿದ ಲೇಖನಿ,
ಬಣ್ಣವಂಟಿದ ಕುಂಚ ,
ಕನಸು ಮೂಡುವ ಇರುಳು, 
ಬೆಳಕ ನೀಡುವ ದೀಪ, 
ಅರ್ಥವಿಲ್ಲದ ಬದುಕು,
ನಿನ್ನದೊಂದೇ ನೆನಪು ...

ಕುಂಚ ಬರೆದಾ ಚಿತ್ರ
ಬಿಳಿಯ ಗೋಡೆಯ ಬದುಕು ,
ಖಾಲಿಹಾಳೆಯ ಬದುಕು
ಲೇಖನಿಯ ಕವಿತೆ,
ಕನಸಿನಾ ಇರುಳಿಗೂ
ದೀಪದಾ ಬೆಳಕು.
ನಡುರಾತ್ರಿಯಲ್ಲೂ
ನಿನ್ನದೊಂದೇ ನೆನಪು,

ಗೋಡೆಯಿದ್ದರೆ ಏನು 
ಕುಂಚವಿಲ್ಲದ ಮೇಲೆ,
ದೀಪವಿದ್ದರೆ ಏನು
ಕನಸೇ ಇಲ್ಲದ ಮೇಲೆ,
ಲೇಖನಿಯೇ ಇಲ್ಲದಾ
ಖಾಲಿ ಹಾಳೆಯಾ ಬಾಳು,
ಅರ್ಥವಿಲ್ಲದ ಬದುಕು,
ನಿನ್ನದೊಂದೇ ನೆನಪು ...
 
- ಫಣೀಶ್ ದುದ್ದ

ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....


ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....
 
ಬಡತನದ ಕುಲುಮೆಗೆ  ಸಿಕ್ಕ ಒಡಲು 
ಬೆಂದು ಬೆವರಿ ಬರಡಾಗಿತ್ತು,
ಕುಲುಮೆಯಲ್ಲೇ ಹುಟ್ಟಿದ ಕಲೆಯೊಂದು
ಮೇಲೆತ್ತುವವರಿಲ್ಲದೆ ಕಮರುತ್ತಿತ್ತು.

ಹಸಿವಿನ ಹೊಟ್ಟೆಗೆ ಹಿಟ್ಟನು ಬೇಡಿ 
ಕಂಡ ಕಂಡವರ ಕಾಲಿಗೆ ಬಿದ್ದಿತ್ತು,
ಕಾಲಲಿ ಒದ್ದ ಕುರುಡು ಕಾಂಚಾಣಕೆ
"ಕಾಲವೆ ಉತ್ತರಿಸಲಿದೆ",ಎಂದಿತ್ತು.  

ಒಡಲಿನ ಕಾವು ನುಡಿಸಿದ ಮಾತು
ಜಗಕೆ ಕಠುವಾಗಿ ಕೇಳಿತ್ತು ,
"ಬದುಕಿ ತೋರಿಸಿ ನೋಡು"ಎಂದು
ಜಗವೇ ಸವಾಲೆಸೆದಿತ್ತು.

ಊದುಕೊಳವೆಯ ಛಲದ ಉಸಿರಿಗೆ
ಕಲೆಯ ಕಿಡಿಯು  ಹೊತ್ತಿತ್ತು ,ಜ್ಯೋತಿ ಬೆಳಗಲು ಹತ್ತಿತು..
ಹಾಗೇ .. ಕಾಲವು ಸರಿದಿತ್ತು ..
ಕಲೆಯು ಬೆಳೆದಿತ್ತು, ಕವಿತೆಯಾಗಿತ್ತು

ಹೊಟ್ಟೆಯ ಹೊರೆಯಲು ಹೊತ್ತಿದ ಕಿಡಿಯು
ಹೊತ್ತಿಗೆಯಾಗಿತ್ತು ,ಜಗದ ಮಸ್ತಕ ಸೇರಿತ್ತು,
ಗೋಡೆಯ ಮೇಲಿನ ಕಾಲನ ಚಕ್ರ
ಮೆಲ್ಲನೆ ತಿರುಗುತ್ತಿತ್ತು ..


-ಫಣೀಶ್ ದುದ್ದ