ಸೋಮವಾರ, ಮಾರ್ಚ್ 27, 2017

ಬೋಂಡ

ಬೋಂಡ...

ಜಗವೆಂಬುದು ಉಪ್ಪು ಖಾರ ಬೆರೆತ
ಕಡಲೆಹಿಟ್ಟಿನ್ನು ಕಲಸಿದಾ ರಸಪಾಕ
ಮೈಸೀಳಿ ಬಿದ್ದರೆ ಮೆಣಸಿನಾ ಕಾಯಂತೆ
ಈ ಜಗದ ಮಜಲೊಳಗೆ
ಎಣ್ಣೆಯಾ ಕಾವನ್ನು ಸಹಿಸುತಾ ಸುಮ್ಮನೆ
ಬೆದರದೇ ಬೆಂದರೆ ಕಷ್ಟಗಳ ಒಳಗೆ
ಬದುಕಾಗುವುದು ಮುಂದೆ
ಬಂಗಾರದ ಬಣ್ಣದ ಸವಿಯಾದ ಬೋಂಡ


-ಫಣೀಶ್ ದುದ್ದ

ಬಂದುಬಿಡು ನೀ ಬೇಗ ..

ಬಂದುಬಿಡು ನೀ ಬೇಗ ...

ನೀನಿಡುವ ರಂಗವಲ್ಲಿಯ ಸೊಬಗ
ನೋಡಲು ಹವಣಿಸುತಿಹನು
ನಿದ್ದೆಯಿಂದೆದ್ದ ಮುದ್ದು ರವಿಯು

 
ನಿನ್ನ ಗಾನದ ಪರಿಯ ಕೇಳಲು
ಚಿಗುರಿ ನಿಂತಿಹುದು
ನೀ ನೆಟ್ಟ ತುಳಸಿಯ ಗಿಡವು

 
ನೀನುಟ್ಟ ಸೀರೆಯ ಸೌಂದರ್ಯ 
ನೋಡಲು ಕಾದಿಹೆನು ಅನುದಿನವು
ನಿನ್ನ ಮನೆಯ ಮುಂದೆ

 
ಬಂದುಬಿಡು ನೀ ಬೇಗ ನನ್ನಯ ಮನೆಗೆ
ಕಲಿಸಬೇಕಿದೆ ಈಗ ನಿನ್ನೆಲ್ಲ ಆಚಾರ
ನಮ್ಮ ಮುದ್ದಾದ ಮಕ್ಕಳಿಗೆ

- ಫಣೀಶ್ ದುದ್ದ

ಗುರುವಾರ, ಮಾರ್ಚ್ 9, 2017

ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?

ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?

ಓಡಿಸುತ್ತಿದ್ದ ಬೈಕಿಂದ ಆಯತಪ್ಪಿ ಬಿದ್ದೊಡನೆ
ಜೇಬೊಳಗೆ ರಿಂಗಣಿಸುವ ಅಮ್ಮನಾ ಕರೆಗಂಟೆ
ಎಲ್ಲೋ ಹಸಿದಿಹ ಕರುವಿನಾ ಕೂಗಿಗೆ
ಹಸುವಿನ ಕೆಚ್ಚಲಲಿ ಜಿನುಗುವಾ ನೊರೆಹಾಲು

 
ಎಷ್ಟಾದರೂ ಅದು ಹೆತ್ತ ಕರುಳಲ್ಲವೇ
ಮಗುವಿನ ಕೂಗಿಗೆ ಮರುಗಲೇ ಬೇಕು
ಹೆಣ್ಣಿಗಲ್ಲದೇ ಮತ್ತಿನ್ಯಾರಿಗಿರಲು ಸಾಧ್ಯ?
ಕಾಣದಾ ಕೂಗಿಗೆ ಮಿಡಿಯುವಾ ಮನಸು

-ಫಣೀಶ್ ದುದ್ದ

ನಮ್ಮೂರ ಬುದುಕು...

 ನಮ್ಮೂರ ಬುದುಕು...

ನಾವು ಚಿಕ್ಕವರಿದ್ದೆವು , ಎಲ್ಲಿಂದಲೂ ತಂದರು
ನಮ್ಮ ಮದುವೆ ಮಾಡಿದರು ,
ಊರ ಮುಂದೊಂದು ಮನೆಯ ಕಟ್ಟಿದರು
"ಅರಳಿಯ ಕಟ್ಟೆ"ಯೆಂದರು,
ಕಹಿಯೆಂದ ಮಾತ್ರಕ್ಕೆ ಅವಳನ್ನೆ ಮರೆತರು,
ಹೇಗೆ ಮರೆಯಲಿ ನನ್ನ ಬಾಳಿನಾ ಬೆಳಕಾ,
ಬೇವಿನಾ ಬದುಕ , ಕೂಡಿ ಹೇಳುವೆವು ನಾವು
ನಮ್ಮೂರ ಬುದುಕ...


ನಮಗಿಂತ ಹಿರಿಯ, ನೂರಾರು ಹರೆಯ
ಬೆನ್ನು ಮುರಿದು ಬಿದ್ದಿಹನು ಆ ಮೂಲೆಯಲ್ಲಿ
ನೀರಿದ್ದ ಹೊತ್ತು ಊರತುಂಬಾ ಗತ್ತು
ರಾಟೆಯಿಲ್ಲದ ಬಾವಿ, ನೀರು ಬತ್ತಿದ ಮೇಲೆ
ಕೇಳುವವರಿನ್ಯಾರು ಅವನಾ ವ್ಯಥೆಯ?


ಊರ ಒಳಗೊಂದು ಶಾನುಭೋಗರ ಮನೆ
ರೂಲು ಹಿಡಿಯಲೂ ಬರದ ಶ್ಯಾನ್ಬೋಗ ಚೆನ್ನಿಗ
ಘಟವಾಣಿ ಹೆಂಗಸು ಅವರಮ್ಮ ಗಂಗಮ್ಮ
ಮೂರೂ ಬಿಟ್ಟ ಗಂಡು ಮೂದೇವಿ ಅಪ್ಪಣ್ಣ
ಅಣ್ಣತಮ್ಮಂದಿರ ಅನುದಿನದ ಜಗಳದಿ 

ಶ್ಯಾನುಭೋಗರ ಶಯನ ಗೃಹವೇ ಭಂಗ

ಊರ ಹೊರಗೊಬ್ಬಳು ನನ್ನವಳ ಸವತಿ
ದೆವ್ವದ ಗೂಡಂತೆ ಅವಳ ಒಂಟಿಯಾ ಗೂಡು
ಸೊಗಸಾದ ಸಿಹಿಯಾದ ಹುಣಸೆಯಾ ಹಣ್ಣು
ಉಪ್ಪು ಮೆಣಸು ಜೀರಿಗೆಯ ಸೇರಿಸಿ
ಕುಟ್ಟುತಿವೆ ಮಕ್ಕಳು ಅವಳ ಅಂಗಳವ ಸೇರಿ


ಮಕ್ಕಳಾ ಕಂಡರೆ ಇವಳಿಗೂ ಪ್ರೀತಿ
ದೂರವೇ ಉಳಿದಿವೆ ಇವಳು ಕಹಿಯೆಂದು ಹೇಳಿ
ಆದರೂ ಬರುತಾವೆ ಒಮ್ಮೊಮ್ಮೆ ಇತ್ತ
ಅವರಮ್ಮ ಮುನಿದಾಗ ಸಿಡುಬು ಸೀತಾಳೆ ಹೊತ್ತು
ನೀಡುವಳು ನನ್ನವಳು ಪ್ರೀತಿಯಾ ತುತ್ತು


ಹೊನ್ನಮ್ಮ ದ್ಯಾವಮ್ಮ ನಮ್ಮೂರ ದೇವ್ರು
ಉಗಾದಿಯ ಮುನ್ನ ಊರಿನಾ ಜಾತ್ರೆ
ಊರಿನಾ ತುಂಬೆಲ್ಲ ತಳಿರಿನಾ ತೋರಣ
ಹೊರಡುವಾ ಮುನ್ನ ಅಡ್ಡೆಯಾ ಉತ್ಸವ
ಬರುವರು ನಮ್ಮ ಬಳಿ ಮರೆಯದೇ ಎಂದೂ


ನೂರಾರು ಮಕ್ಕಳಾ ಹುಟ್ಟನ್ನು ಕಂಡಿಹೆವು
ನೂರಾರು ಸಾವಿನಾ ಮೆರವಣಿಗೆಯ ನೋಡಿಹೆವು
ನೂರಾರು ವ್ಯಾಜ್ಯಕೆ ನಮ್ಮ ಮನೆಯೆ ಅಡ್ಡ
ನೂರಾರು ತೀರ್ಪಿಗೆ ನಾವಿಬ್ಬರೆ ಸಾಕ್ಷಿ
ನೂರಾರು ವರುಷದಿ ಬಾಳುತಿರುವೆವು ಇಲ್ಲಿ
ಹರುಷದಿ ಹೇಳುವೆವು ಇದು ನಮ್ಮಯ ಹಳ್ಳಿ


-ಫಣೀಶ್ ದುದ್ದ

ಮನೆ

ಮನೆ
 
ನಮ್ಮನೆ, ನಿಮ್ಮನೆ,
ನೆರೆ ಮನೆ, ಹೊರ ಮನೆ,
ಯಾವ ಮನೆಯಿಲ್ಲೀಗ
ಯಾರ ಮನೆಯೋ ?

 
ನಮ್ಮದು, ನಿಮ್ಮದು,
ಎಂಬುದೇ ಸುಳ್ಳದು,
ಅವನೊಬ್ಬನಾಟವೇ
ದಿಟವಾದ ಪಾಠವು

 
ನೆನ್ನೆಯು ಅಳಿದೆದೆ,
ನಾಳೆಯು ಬರಲಿದೆ,
ಇಂದಿನ ದಿನವಿದೋ
ನಿಜವಾದ ಜೀವನ

 
ಜಾತಿಯಾ ಮರೆಯಿರಿ
ಭೇಧವಾ ತೊರೆಯಿರಿ
ಬನ್ನಿರಿ ಕೂಡುವಾ
ಅವನ ಮನೆಯಂಗಳದಿ ಆಡುವಾ.



-ಫಣೀಶ್ ದುದ್ದ

ಭ್ರಮೆ

 ಭ್ರಮೆ

ಯಾರ ದೃಷ್ಟಿಯು ಬಿತ್ತೋ
ನಮ್ಮಿಬ್ಬರ ಸಂಭ್ರಮಕೆ
ಹಾರೇ ಹೋಯಿತು ಹಕ್ಕಿ
ಗೂಡ ಬಿಟ್ಟು ಗುಮ್ಮನೆ


ಇನ್ನೆಲ್ಲಿ ಹುಟ್ಟಿಹುದು
ಸಂಭ್ರಮವು ಈ ಮನದಿ
ನೀನಿರದ ಮನೆಯಿದುವೆ
ನೀರವದ ಗೂಡು


ಮನದಾಳದ ಮಾಯೆಗೆ
ನೀ ಮರಳಿ ಬರುವೆಂಬ ಭ್ರಾಂತಿ
ಭ್ರಮೆಯೊಳಗೆ ಸಾಗುತಿದೆ
ಬದುಕಿನಾ ದೋಣಿ ...
.

- ಫಣೀಶ್ ದುದ್ದ