ಮಂಗಳವಾರ, ಜುಲೈ 4, 2017

ಹೇಗೆ ತಾನೆ ಅರ್ಥವಾದೀತು?

ಹೇಗೆ ತಾನೆ ಅರ್ಥವಾದೀತು?

ನಾಲ್ಕಾರು ಜನರು
ಬೀದಿಯ ಕೊನೆಯ ಮನೆಯ
ಮುಂದೆ ಕೈ ಕಟ್ಟಿ ನಿಂತಿದ್ದಾರೆ,
ಎಂದೂ ಇಲ್ಲದ ಜನರು
ಇಂದೇಕೋ ಅಲ್ಲಿದ್ದಾರೆ.
ಊರ ತುಂಬಾ
ಸಿಡಿಮಿಡಿಯೆನ್ನುತ್ತಿದ್ದ
ಆ ಮನುಷ್ಯನ ಸದ್ದಿಲ್ಲ.
ತೇಟ್ ಭೂತಯ್ಯನ
ಪ್ರತಿರೂಪವೇ...


ಮೂವತ್ತು ವರುಷದ ನಂತರ
ಆ ಮನೆಯ ಮುಂದೆ
ಬೆಂಕಿಯ ನರ್ತನ,
ಬೀದಿಯ ತುಂಬೆಲ್ಲಾ
ಸ್ಮಶಾನ ಮೌನ,
ಅವನ ನೇರ ನುಡಿಗೋ,
ಕಡು ಕೋಪಕ್ಕೋ,
ಊರ ಜನಕೆಲ್ಲ
ಅವನೆಂದರೆ ಸಿಟ್ಟು,
ಒಂಟಿ ಜೀವದ
ಅಂತರಾಳದ ನೋವು
ಹೇಗೆ ತಾನೆ ಅರ್ಥವಾದೀತು.


ಇನ್ನು ಅವನಿಲ್ಲ ,
ಅವನ ಸಿಡಿಮಿಡಿಯಿಲ್ಲ,
ಕಂಬನಿ ಮಿಡಿಯುವವರೂ ಇಲ್ಲ,
ಅದೇಕೋ ಏನೋ
ಅವನು ಸಾಕಿದ ನಾಯಿ ಮಾತ್ರ
ಒಂದೇ ಸಮನೆ
ಅಳುತಲಿದೆ.


- ಫಣೀಶ್ ದುದ್ದ

ಸಾರ್ಥಕತೆಯುಂಟೇ ?

ಸಾರ್ಥಕತೆಯುಂಟೇ ?
 
ಜಗವೆಲ್ಲ ಬೆಳಗುವ ಜ್ಯೋತಿಯ
ಅಂತರಾಳದಲ್ಲೊಂದು ನೋವು ,
ತಾನೇ ಉರಿದು ಜಗವ ಬೆಳಗಿದರೂ
ತನ್ನಡಿಯಲಿ ಮಾತ್ರ ಕಡುಗತ್ತಲೆ,
ಇದೆಂತಹಾ ನ್ಯಾಯ ?
ಕತ್ತಲ ಕೂಪದಂತಾದರೆ 
ಜಗ ಬೆಳಗುವ 
ಜೀವಜ್ಯೋತಿಯ ಮನೆಯು,
ಸಾರ್ಥಕತೆಯುಂಟೇ
ಬೆಳಕಿನಾ ಬದುಕಿಗೆ?
 
- ಫಣೀಶ್ ದುದ್ದ
ಎಲ್ಲಿ ಹೋದೆ ಗೆಳತಿ?

ನೀನಲ್ಲವೇ ಗೆಳತಿ
ಬರಡು ಭೂಮಿಯಾಗಿದ್ದ
ಈ ನನ್ನ ಮನಕೆ
ಒಲವಿನ ಮಳೆ ಬರಿಸಿ,
ಪ್ರೀತಿಯ ಪುಟ್ಟ ಗಿಡ ನೆಟ್ಟು ,
ನಮ್ಮ ಪ್ರೀತಿಯ ಸಂಕೇತವಾಗಿ
ನಮ್ಮ ಮನೆಯಂಗಳದಲ್ಲೊಂದು
ಹೂವಿನ ಗಿಡ ನಿಟ್ಟವಳು ?
ಮತ್ತೇಕೆ ಕವಲು ದಾರಿ
ಹಿಡಿದು ಹೊರಟೆ?

ನೀನೇನೋ ಹೋದೆ,
ನೀ ನೆಟ್ಟ ಗಿಡಗಳ
ಪಾಡು ಏನಾಗಬೇಕು ಹೇಳು ?
ಮನೆಯಂಗಳದ ಗಿಡಕ್ಕೇನೋ
ಮಳೆರಾಯನ ಪ್ರೀತಿಯಿತ್ತು.
ಮನದಂಗಳದ ಗಿಡಕ್ಕೆ ?
ನನ್ನ ಕಣ್ಣೀರು ಸಾಲುತ್ತಿಲ್ಲ.
ಬಿಕ್ಕಿ ಬಿಕ್ಕಿ ಅತ್ತರೂ
ನೀನೇ ಬೇಕೆನ್ನುತಲಿದೆ.

ಮನೆಯಂಗಳದ ಗಿಡ
ಚಿಗುರಿ ಕವಲೊಡೆದು
ದೊಡ್ಡದಾಗಿ,
ಮುದ್ದಾದ ಹೂವೊಂದು
ಅರಳಿ ನಿಂತಿದೆ.
ನೋಡು ಬಾ ಗೆಳತಿ ,
ಮನದಂಗಳದ ಗಿಡಕೂ
ಬದುಕಬೇಕೆಂಬ ಆಸೆ,
ಆದರೆ ನೀನಿರದೆ ಹೇಗೆ?
ಬಂದುಬಿಡು ಗೆಳತಿ.
ಬಂದುಬಿಡು.

- ಫಣೀಶ್ ದುದ್ದ