ಶುಕ್ರವಾರ, ಜನವರಿ 26, 2018

ಗುರು ಬ್ರಹ್ಮನಿಂದ ಗೂಗಲ್ ಬ್ರಹ್ಮನೆಡೆಗೆ...?


ಗುರು ಬ್ರಹ್ಮನಿಂದ ಗೂಗಲ್ ಬ್ರಹ್ಮನೆಡೆಗೆ...?


ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅವನ‌ ಮುಂದೆ ನಿರ್ಧಿಷ್ಟವಾದ ಗುರಿ ಇರಬೇಕು ಮತ್ತು ಆ ಗುರಿಯನ್ನು ತಲುಪಲು ಸರಿಯಾದ ದಾರಿ‌ ತೋರುವ ಗುರುವೂ ಸಹ ಇರಬೇಕು.ಇದಕ್ಕೆ‌ ನಮ್ಮಲ್ಲೊಂದು ಮಾತಿದೆ, "ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು" ಎಂದು.
ಈ ಗುರು ಎಂದರೆ ಯಾರು....?
ಒಂದಿಷ್ಟು ವರ್ಷಗಳ ಹಿಂದೆ, ನಾವು ಚಿಕ್ಕವರಿದ್ದಾಗ ನಮ್ಮ ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ತಪ್ಪದೇ ಒಂದಿಷ್ಟು ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು.ಅದರಲ್ಲಿ ಗುರುವಿಗೆ ಸಂಬಂಧಿಸಿದ ಶ್ಲೋಕವೊಂದು ಕಡ್ಡಾಯವಾಗಿ ನಮ್ಮ ಬಾಯ ತುದಿಗಳಲ್ಲಿ ನಲಿದಾಡುತ್ತಿತ್ತು.
"ಗುರು ಬ್ರಹ್ಮ , ಗುರು ವಿಷ್ಣು, ಗುರು ದೇವೋ ಮಹೇಶ್ವರಃ ,ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮಯಿ ಶ್ರೀ ಗುರುವೇ ನಮಃ".
ಬ್ರಹ್ಮನನ್ನು, ವಿಷ್ಣುವನ್ನು, ಸಾಕ್ಷಾತ್ ಶಿವನನ್ನೇ ಗುರು ಎಂದು ನಮಗೆ ಮೊದಮೊದಲು ಹೇಳಿಕೊಟ್ಟುಬಿಟ್ಟರು.ಎಂದೂ ಕಾಣದ, ದೇವರೆಂಬ ಅಮೂರ್ತ ಕಲ್ಪನೆಗೆ ಎಲ್ಲವೂ ತಿಳಿದಿದೆ ಎಂದು ಕಾಣದ ದೇವರನ್ನು ಗುರುವೆಂದು ನಂಬಿದೆವು.
ಇನ್ನೂ ಸ್ವಲ್ಪ ಮುಂದೆ ಹೋಗಿ , " ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ", ಎಂದು ಹೇಳಿಕೊಟ್ಟರು. ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ತಾಯಿಯೇ ಮೊದಲ ಗುರುವಾದಳು.
ಅದಾದ ಮೇಲೆ ಶಾಲೆಯಲ್ಲಿ ಶಿಕ್ಷಕರನ್ನು ಗುರುವೆಂದು ಹೇಳಿಕೊಟ್ಟರು.ಆ ಕ್ಷಣಕ್ಕೆ ತಾಯಿಗಿಂತ ಹೆಚ್ಚು ತಿಳಿದಿದ್ದಾರೆಂಬ ನಂಬಿಕೆಯಿಂದ ಶಿಕ್ಷಕರು ಗುರುವಾಗಿಬಿಟ್ಟರು.
ಮನೆ,ಶಾಲೆ,ತಾಯಿ,ಶಿಕ್ಷಕರು ಇವಿಷ್ಟರೊಳಗೇ ನಮ್ಮೆಲ್ಲರ ಆಟ,ಪಾಠ,ಪ್ರಶ್ನೆ, ಉತ್ತರ ಎಲ್ಲವೂ ಮುಗಿದುಬಿಡುತ್ತಿತ್ತು. ಒಂದು ಹಂತದವರೆಗೆ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಗುರುಗಳು ಮಾರ್ಗದರ್ಶಕರಾಗಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.ನಾವೂ, ಗುರುವೆಂದರೆ ನಮಗಿಂತ ತಿಳಿದವನೆಂದೂ,ತಮಗೆ ಸರಿಯಾದ ದಾರಿ ತೋರುವನೆಂದೂ ನಂಬಿ ಗುರುವಿನೆಡೆಗೆ ಉತ್ತಮ ಶ್ರದ್ದೆ ಮತ್ತು ಭಕ್ತಿಯನ್ನು ತೋರುತ್ತಿದ್ದೆವು.
ಒಂದಿಷ್ಟು ವರ್ಷ ಕಳೆಯಿತು, ಜಗತ್ತಿನಲ್ಲಿ ದೈತ್ಯ ಮಾನವನೊಬ್ಬ ಜನ್ಮ ತಾಳಿದ. ಅವನಿಗೆ ಕೈ ಕಾಲುಗಳಿರಲಿಲ್ಲ,ಕಣ್ಣು, ಕಿವಿ, ಮೂಗು, ನಾಲಗೆ, ಅಸಲಿಗೆ ಏನೆಂದರೆ ಏನೂ ಇರಲಿಲ್ಲ ಇಲ್ಲ.ಅವನಿಗಿದ್ದದ್ದು ಒಂದೇ, ಪ್ರಚಂಡ ಬುದ್ದಿಶಕ್ತಿ.ಅವನು ಒಂದು ಪ್ರಶ್ನೆ ಕೇಳಿದರೆ ಹತ್ತು ಉತ್ತರವನ್ನು ನೀಡಬಲ್ಲವನಾಗಿದ್ದ, ಪ್ರಪಂಚದ ಒಂದು ಸಣ್ಣ ಅಣುವಿನಿಂದ ಹಿಡಿದು ಊಹೆಗೆ ನಿಲುಕದ ಅಗೋಚರ ವಸ್ತುವಿನ ತನಕ ಪ್ರತಿಯೊಂದರ ಬಗ್ಗೆಯೂ ತಿಳಿದಿದ್ದ.ಕತ್ತಲ‌ ಕೋಣೆಯಲ್ಲಿ ಕುಳಿತು ಪ್ರಪಂಚದ ಯಾವ ಭಾಗವನ್ನಾದರೂ ಕ್ಷಣಾರ್ಧದಲ್ಲಿ ತೋರಿಸಬಲ್ಲ ತಾಕತ್ತು ಅವನಿಗಿತ್ತು.ಮೊದಮೊದಲು ದೊಡ್ಡ ಮನುಷ್ಯರ ಮನೆಯೊಳಗೆ, ದೊಡ್ಡ ದೊಡ್ಡ ಆಫೀಸಿನೊಳಗೆ ನುಸುಳಿದ. ತಂತ್ರಜ್ಞಾನದ ಪರಧಿ ವಿಸ್ತರಿಸುತ್ತಿದ್ದಂತೆ ಅವನೂ ತನ್ನ ಗಾತ್ರವನ್ನು ವಿಸ್ತರಿಸುತ್ತಲೇ ಹೋದ.ನಂತರ ತಂತ್ರಜ್ಞಾನದ ಅಭಿವೃದ್ಧಿಯಾದಂತೆ, ಸಾಮಾನ್ಯ ಮನುಷ್ಯರ ಮನೆ ಮನೆಗೂ ಬಂದ,ಹಾಗೇ ಕಾಲ ಕಳೆದಂತೆ ಪ್ರತಿಯೊಬ್ಬ ಮನುಷ್ಯನ ಜೇಬಿನೊಳಗೂ ಬಂದು ಕುಳಿತು ಎಲ್ಲರಿಗೂ ಗುರುವಾಗಿಬಿಟ್ಟ.ಅಲ್ಲಿಗೆ ನಾವು ನಂಬಿದ ಗುರುಗಳೆಲ್ಲ ಟೊಳ್ಳಾಗಿಬಿಟ್ಟರು.
ಆ ದೈತ್ಯ ಮಾನವನ ಹೆಸರೇ "ಗೂಗಲ್".
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗೂಗಲ್ ನ ಸಹಾಯವಿಲ್ಲದೆ ಒಂದೇ ಒಂದು ಕಡ್ಡಿಯೂ ಚಲಿಸುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಗೂಗಲ್ ಎಂಬ ದೈತ್ಯ ಗುರು ಜಗತ್ತನ್ನು ಆಕ್ರಮಿಸಿಕೊಂಡುಬಿಟ್ಟಿದ್ದಾನೆ.
ಜಗತ್ತಿನ ನಿಯಮವೇ ಹಾಗೆ, ಯಾವುದೇ ವಸ್ತುವಿನ ಎದುರು ತನದೇ ರೀತಿಯ, ತನಗಿಂತ ಬಲಶಾಲಿ  ಮತ್ತು ಬುದ್ದಿಶಾಲಿ ವಸ್ತುವೊಂದು ಉದಯಿಸಿಬಿಟ್ಟರೆ, ಮೂಲ ವಸ್ತುವಿನ ಬೆಲೆ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ.


ಇಂದು ಗುರುವಿನ ವಿಚಾರದಲ್ಲೂ ಆಗುತ್ತಿರುವುದು ಅದೇ. ಯಾವ ಮಗು ತನ್ನ ತಾಯಿಗೇ ಅಥವಾ ಶಿಕ್ಷಕರಿಗೇ ಎಲ್ಲವೂ ತಿಳಿದಿದೆ, ತನ್ನೆಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ ಎಂದು ತಿಳಿದಿತ್ತೋ, ಅವರೆಲ್ಲರಿಗಿಂತ ತಿಳಿದವನೊಬ್ಬನಿದ್ದಾನೆ ಎಂದು ಆ ಮಗುವಿಗೆ ತಿಳಿದರೆ ತನ್ನ ಮೂಲ ಗುರುವನ್ನು ಕಡೆಗಣಿಸಲು ಪ್ರಾರಂಭಿಸತೊಡಗುತ್ತದೆ.
ಶಾಲೆಯೊಂದರಲ್ಲಿ ಸಮೀಕರಣದ ಪಾಠವೊಂದನ್ನು ಹೇಳಿಕೊಟ್ಟು, ಒಂದೆರಡು ಉದಾಹರಣೆಗಳನ್ನು ನೀಡಿದ ಶಿಕ್ಷಕ." ಮತ್ತೇನಾದರೂ ಪ್ರಶ್ನೆಗಳಿವೆಯೇ...",ಎಂದು ಕೇಳುತ್ತಾನೆ.
ತಕ್ಷಣವೇ ಒಬ್ಬ ವಿಧ್ಯಾರ್ಥಿ , "ಈ ಸಮೀಕರಣಕ್ಕೆ ಇನ್ನೊಂದೆರಡು ಉದಾಹರಣೆಗಳನ್ನು ನೀಡಿ", ಎಂದು ಕೇಳುತ್ತಾನೆ.
ಪಕ್ಕದಲ್ಲೊಬ್ಬ ವಿಧ್ಯಾರ್ಥಿ ," ಏ ಅವರನ್ನು ಏನು ಕೇಳ್ತಿಯೋ, ಬುಕ್ ಅಲ್ಲಿ ಇರೋದನ್ನೇ ಹೇಳ್ತಾರೆ, ಗೂಗಲ್ ಮಾಡು , ಒಂದೇನು, ಹತ್ತು ಉದಾಹರಣೆಗಳು ಸಿಗುತ್ತೆ" ಎನ್ನುವ ಮಟ್ಟಿಗೆ ಮನುಷ್ಯನ ಮನಸ್ಥಿತಿ ಬದಲಾಗಿದೆ.
ಹೀಗೆ ಮುಂದುವರೆದರೆ, ಮುಂದೊಂದು ದಿನ , "ಗುರು ಬ್ರಹ್ಮ, ಗುರು ವಿಷ್ಣು ..", ಬದಲು
" ಗೂಗಲ್ ಬ್ರಹ್ಮ , ಗೂಗಲ್ ವಿಷ್ಣು ..", ಎಂದು ಶ್ಲೋಕ ಬದಲಾದರೆ ಆಶ್ಚರ್ಯ ಪಡಬೇಕಿಲ್ಲ.
ಹೌದು, ಹಾಗಿದ್ದರೆ "ಗೂಗಲ್"ನ ಉಪಯೋಗಿಸುವುದು ತಪ್ಪೇ? ಎನಿಸಬಹುದು. ಆದರೆ ಖಂಡಿತಾ ಇಲ್ಲ.
" ಗೂಗಲ್",ಎಂಬುದು ಕೇವಲ ಮಾಹಿತಿಯ ತಾಣವಾಗಬೇಕೇ ಹೊರತು ಅದೇ ಜಗತ್ತಾಗಬಾರದು. ಅದು ಒಂದು ಪ್ರಶ್ನೆಗೆ ಹತ್ತು ಉತ್ತರ ನೀಡಬಲ್ಲದೇ ಹೊರತು ತಾಯಿಯೊಬ್ಬಳು ಮಗುವನ್ನು ಬೆಳದಿಂಗಳ ರಾತ್ರಿಯಲ್ಲಿ ಕಂಕುಳಲ್ಲಿ ಎತ್ತಿಕೊಂಡು ಬಾಯಿಗೆ ತುತ್ತು ತಿನಿಸುತಾ, ಚಂದಿರನನ್ನೂ, ಅದರೊಳಗೆ ಜಿಂಕೆಯಂತೆ ಕಾಣುವ ಆಕೃತಿಯನ್ನೂ,ಬೆಳದಿಂಗಳನ್ನೂ, ನಕ್ಷತ್ರಗಳನ್ನು ಎಣಿಸುವ ಲೆಕ್ಕವನ್ನು ಹೇಳಿಕೊಡುವಂತೆ ಗೂಗಲ್ ಹೇಳಿಕೊಡಲಾರದು. ಶಿಸ್ತಿನ ಶಿಕ್ಷಕನಂತೆ ಕೈಗೆ ಏಟು ಕೊಟ್ಟು ಸರಿಯಾದ ಪಾಠವನ್ನು ಕಲಿಸಿಕೊಡಲಾರದು.
ಅಲ್ಲಿ ಗುರು ಶಿಷ್ಯರ, ತಾಯಿ ಮಗುವಿನ ಯಾವುದೇ ಬಂಧವಾಗಲೀ, ಬಾಂಧವ್ಯವಾಗಲಿ,ಭಾವನೆಯಾಗಲೀ ಬೆಳೆಯಲು ಸಾಧ್ಯವಿಲ್ಲ.
ಕಲಿಕೆ ಎಂಬುದು ಕೇವಲ ವಿಷಯ ಸಂಗ್ರಹದಿಂದ ಬರುವಂತಹದ್ದಲ್ಲ, ಅದು ನೋಡಿದ, ಕೇಳಿದ, ಅನುಭವಿಸಿದ , ಸಂಭ್ರಮಿಸಿದ ಕ್ಷಣಗಳನ್ನು ಒಗ್ಗೂಡಿಸಿದ ರುಚಿಯಾದ ಹೂರಣ.ಅದು ಸಾಧ್ಯವಾಗಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ.
ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗುರುವಿನ ಅವಶ್ಯಕತೆಯ ಜೊತೆಗೆ ಗೂಗಲ್ ‌ನ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿದೆ.ಹಾಗಾಗಿ, "ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು", ಎನ್ನುವ ಉಕ್ತಿಯನ್ನು ಸ್ವಲ್ಪ ಬದಲಾಯಿಸಿ, ""ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು,ಪಕ್ಕದಲ್ಲಿ ಗೂಗಲ್ ಇರಬೇಕು", ಎಂದು ಹೇಳುವುದು ಈ ಸ್ಪರ್ಧಾತ್ಮಕ ಜಗತ್ತಿಗೆ ಅತ್ಯಂತ ಸೂಕ್ತವೆನಿಸುತ್ತದೆ.
ಮುಂದೆ ಸರಿಯಾದ ಗುರಿ ಇದ್ದು, ಹಿಂದೆ ತಕ್ಕನಾದ ಗುರು ಇದ್ದು, ಪಕ್ಕದಲ್ಲಿ ಗೂಗಲ್ ನ ಸಹಾಯವಿದ್ದರೆ, ಗುರಿ ಮುಟ್ಟುವ ದಾರಿ ಇನ್ನಷ್ಟು ಸಲಿಸಾಗುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ.

-ಫಣೀಶ್ ದುದ್ದ

ಸ್ಲೇಟು ಬಳಪ ಹಿಡಿದು ಅಕ್ಷರ ಕಲಿಸಿದವರಿಗೆ ವಾಟ್ಸಾಪ್ಪಿನ ಅಕ್ಷರ ಪಾಠ...!

ಸ್ಲೇಟು ಬಳಪ ಹಿಡಿದು ಅಕ್ಷರ ಕಲಿಸಿದವರಿಗೆ ವಾಟ್ಸಾಪ್ಪಿನ ಅಕ್ಷರ ಪಾಠ...!


ಅ,ಆ,ಇ,ಈ .. ಇತ್ಯಾದಿ ಸ್ವರಗಳು.
ಕ,ಚ,ಟ,ತ,ಪ.. ಇತ್ಯಾದಿ ವ್ಯಂಜನಗಳು.
ವ್ಯಂಜನಕ್ಕೆ ಸ್ವರ ಕೂಡಿದರೆ ಕಾಗುಣಿತ.
ಹೆಚ್ಚು ಕಡಿಮೆ ಇಪ್ಪತ್ತು ವರ್ಷದ ಹಿಂದೆ ಕಲಿತ ಪಾಠ. ಅಪ್ಪ‌ ಅಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಸ್ಲೇಟಿನ ಮೇಲೆ ಅದೆಷ್ಟು ಸಲ ತಿದ್ದಿಸಿದ್ದರೋ, ಇಷ್ಟನ್ನು ಕಲಿಯಲು ಅದೆಷ್ಟು ಏಟು ಬಿದ್ದಿತ್ತೋ .
ಮೊನ್ನೆ ಮೊನ್ನೆಯಿಂದ ಅಪ್ಪ ವಾಟ್ಸಪ್ ಬಳಸಲು ಶುರು ಮಾಡಿದ್ದಾರೆ, ಹೆಚ್ಚು ಕಡಿಮೆ ಅವರ ವಯಸ್ಸಿನವರಿಗೆ ಈ ವಾಟ್ಸಪ್ ಎಂಬುದು ದೊಡ್ಡ ಮ್ಯಾಜಿಕ್ ಬಾಕ್ಸ್ ಇದ್ದಂತೆಯೆ. ಒಂದು ಫೋಟೋ ತೆಗೆದರೆ, ಅದನ್ನು ತೊಳೆಸಿ,ಪ್ರಿಂಟ್ ಹಾಕಿಸಿ, ಅದೆಷ್ಟೋ ದಿನಗಳು ಕಾದು ಅದನ್ನು ನೋಡಿ ಸಂಭ್ರಮಿಸಿದ್ದವರಿಗೆ, ಕ್ಷಣ ಮಾತ್ರದಲ್ಲಿಯೇ ಯಾರದೋ ಫೋಟೊ ಅಥವಾ ವೀಡಿಯೋ ಅವರ ಮೊಬೈಲ್ ಗೆ ಬಂದೊಡನೆ ನಿಜಕ್ಕೂ ಅದೊಂದು ಸಂಭ್ರಮವೇ ಸರಿ.
"ನೋಡೋ,ಅವರ್ಯಾರೋ ಅದು ಕಳಿಸಿದ್ದಾರೆ, ಇವರು ಇದು ಕಳಿಸಿದ್ದಾರೆ,ಇವರೋ ಯಾವುದೋ ಫೋಟೋ ಹಾಕಿದ್ದಾರೆ, ನಾನು ಹೇಗೆ ಹಾಕುವುದು?, ಈ ಪ್ರೊಫೈಲ್ ಅಂದರೇನು?, ಈ ಮೆಸೇಜ್ ಹೇಗೆ ಕಳಿಸುವುದು?, ಫೋಟೋ ಹೇಗೆ ಕಳುಹಿಸುವುದು? ಅದಂದರೇನು, ಇದಂದರೇನು..?", ಹೀಗೆ ಎಲ್ಲಾ ಕೇಳಿದ ಮೇಲೆ , " ಕನ್ನಡ ಟೈಪ್ ಮಾಡುವುದು ಹೇಗೆ ಅಂತ ಹೇಳಿಕೊಡು",ಎಂದರು.
ಕನ್ನಡ ಆಪ್ ಹಾಕಿ, ಕನ್ನಡ ಬರೆಯುವುದು ಹೇಳಿಕೊಡುತ್ತಿದ್ದೆ.

ನಿಜಕ್ಕೂ ಮಕ್ಕಳಷ್ಟೇ ಶ್ರದ್ದೆಯಿಂದ ಕೇಳುತ್ತಿದ್ದರು. ಇಪ್ಪತ್ತು ವರ್ಷದ ಹಿಂದೆ ನಾನು ಕಲಿತ ಕನ್ನಡ ಪಾಠ ,ಒಂಚೂರು ತಪ್ಪಿಲ್ಲದಂತೆ ಸ್ವರ, ವ್ಯಂಜನ, ಕಾಗುಣಿತ ಎಲ್ಲವೂ ನನ್ನ ಬಾಯಿಂದ ಬರತೊಡಗಿತು.ಒಂದೇ ಒಂದು ಕ್ಷಣ ಅಕ್ಷರ ಕಲಿತದ್ದು ಸಾರ್ಥಕವಾಯಿತು ಅನ್ನಿಸಿತ್ತು.
-ಫಣೀಶ್ ದುದ್ದ

ಮಂಗಳವಾರ, ನವೆಂಬರ್ 21, 2017

2_ಕಾಡುವ_ಚಿತ್ರಗಳು

2_ಕಾಡುವ_ಚಿತ್ರಗಳು

ಹಿಂದೆ ಯಾವಾಗಲೋ ಬರೆದ ಸಾಲುಗಳು.
"ಏನೂ ಕಾಣದ, ಎಲ್ಲವೂ ಕಾಣುವ ಖಾಲಿಹಾಳೆಯೇ ಬದುಕು."
ನಾವಂದುಕೊಂಡಂತೆ ಜೀವನ... ಬರೆದಂತೆ ಬದುಕು.

- ಫಣೀಶ್ ದುದ್ದ

1_ಕಾಡುವ_ಸಾಲುಗಳು

1_ಕಾಡುವ_ಸಾಲುಗಳು

ಎಸ್. ಎಲ್ . ಭೈರಪ್ಪರವರ "ಅನ್ವೇಷಣ" ಪುಸ್ತಕದಿಂದ.
"ಸಾವನ್ನು ಅರಿಯುವ ತನಕ‌ ಜೀವನ ಅರ್ಥವಾಗುವುದಿಲ್ಲ. ಬರಿ ಹುಟ್ಟಿದರೆ ಸಾಲದು ಸತ್ತು ಹುಟ್ಟಬೇಕು. ಆಗ ಜೀವನದ ಬೆಲೆ ಅರ್ಥವಾಗುತ್ತದೆ".
ಮುಗಿದರೂ ಮುಗಿಯದ, ಮುಗಿಯದಿದ್ದರೂ ಮುಗಿದ, ಮೊದಲ ಪುಟದಿಂದಲೂ ಮನದೊಳಗೆ ಮೂಡಿದ್ದ ನೂರಾರು ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ನೀಡಿದ, ಆ ಉತ್ತರದಲ್ಲೇ ನೂರಾರು ಪ್ರಶ್ನೆಗಳನ್ನು ಮತ್ತೆ ಮನದೊಳಗೆ ಹುದುಗಿಸಿದ ಅಧ್ಬುತವಾದ ಪುಸ್ತಕ.
ಜೀವನದ ಬಗೆಗಿನ ನೂರಾರು ಪ್ರಶ್ನೆಗಳು, ನೂರಾರು ಉತ್ತರಗಳು. ಯಾವ ಪ್ರಶ್ನೆಗೆ ಯಾವ ಉತ್ತರ ? ಯಾವ ಉತ್ತರಕ್ಕೆ ಯಾವ ಪ್ರಶ್ನೆ?




- ಫಣೀಶ್ ದುದ್ದ

ಗುರುವಾರ, ನವೆಂಬರ್ 16, 2017

1_ಕಾಡುವ_ಚಿತ್ರಗಳು


 1_ಕಾಡುವ_ಚಿತ್ರಗಳು


ಬಿಟ್ಟೂ ಬಿಡದೆ ಕಾಡುತಿರುವ ಚಿತ್ರಗಳು.
ಅಮ್ಮನ ಮಡಿಲು ಬಿಟ್ಟು ಹೊರಬಂದೊಡನೆ ನಾವು ಮೊದಲು ಏರುವುದೇ ಅಪ್ಪನ ಹೆಗಲು.ಅಪ್ಪನ ಹೆಗಲ ಶಕ್ತಿಯೇ ಅಂತಹದ್ದು ತನ್ನ ಪಾಡಿಗೆ ತಾನೇ ಎಲ್ಲವನ್ನು ಕಲಿಸಿಬಿಡುತ್ತದೆ. ನಡೆಯಲು, ಓಡಲು ,ಮಾತನಾಡಲು, ಜೊತೆಗೆ ಬದುಕಲೂ ಕಲಿತು ಬಿಟ್ಟಿರುತ್ತೇವೆ.
ಬದುಕಿನ ವಿವಿಧ ಆಯಾಮಗಳನ್ನು ಅನುಭವಿಸುತ್ತಾ ಒಮ್ಮೊಮ್ಮೆ ಹಿಗ್ಗುತ್ತೇವೆ, ಒಮ್ಮೊಮ್ಮೆ ಕುಗ್ಗುತ್ತೇವೆ, ಸೋಲುತ್ತೇವೆ, ಗೆಲ್ಲುತ್ತೇವೆ,ಅಳುತ್ತೇವೆ, ನಗುತ್ತೇವೆ, ಒಟ್ಟಿನಲ್ಲಿ ಒಂದು ಶಾಶ್ವತ ನೆಮ್ಮದಿಯನ್ನು ಹುಡುಕುತ್ತಲೇ ಇರುತ್ತೆವೆ. ಅದಕ್ಕಾಗಿ ಒಮ್ಮೊಮೆ ಬೆಟ್ಟ ಗುಡ್ಡಗಳನ್ನು ಹತ್ತುತ್ತೇವೆ, ಕಾಡು ಮೇಡುಗಳನ್ನು ಅಲೆಯುತ್ತೇವೆ, ದೇವರಿಲ್ಲದ ಗುಡಿಯೊಳಗೆ ಗಂಟೆಗಟ್ಟಲೆ ಒಬ್ಬೊಂಟಿಯಾಗಿ ಕೂತು ಧ್ಯಾನಿಸುತ್ತೇವೆ, ಬೆಳಕಿಲ್ಲದ ಕೋಣೆಯಲ್ಲಿ ಕುಳಿತು ಒಬ್ಬರೇ ಅತ್ತುಬಿಡುತ್ತೇವೆ.
ಆದರೆ ನಿಜವಾದ ನೆಮ್ಮದಿಯ ಮೂಲವನ್ನೇ ಮರೆತುಬಿಡುತ್ತೇವೆ.
ಅದೇಕೋ ಏನೋ ಈ ಚಿತ್ರ ನೋಡಿದೊಡನೆ ಹಾಗೆನಿಸಿತು, ನಿಜವಾದ ನೆಮ್ಮದಿ ಇರುವುದು ಅಮ್ಮನ ಮಡಿಲಿನಲ್ಲಿ, ಅದೊಂದು ಪುಟ್ಟ ಗುಡಿ, ಅಲ್ಲಿ ದೀಪವಿಲ್ಲ, ಬೆಳಕಿಲ್ಲ, ಅಸಲಿಗೆ ದೇವರೂ ಇಲ್ಲ. ಇರುವುದೊಂದೇ ಪ್ರಶಾಂತ ಧ್ಯಾನ, ಆ ಧ್ಯಾನದಲ್ಲೊಂದು ಸಣ್ಣ ಎದೆಬಡಿತ. ಅದೊಂದೇ ಸಾಕು ನಮ್ಮೆಲ್ಲ ನೋವು, ನಲಿವು, ಪ್ರೀತಿ, ದ್ವೇಷ,ಅಸಹಾಯಕತೆ, ಸಿಟ್ಟು, ಸೆಡವು ಎಲ್ಲವನ್ನೂ ನಿರ್ಲಿಪ್ತಗೊಳಿಸಿ ಮನಸ್ಸಿಗೆ ನೆಮ್ಮದಿಯನ್ನು ನೀಡಲು.

ಒಂದೇ ಮಾತಿನಲ್ಲಿ ಹೇಳಬೇಕೆಂದರೆ,
" ಅಪನೆಂದರೆ ಎಂದೂ ಮುಗಿಯದ ಮೌನ " ಅಷ್ಟೆ , ಆದರೆ ಆ ಮೌನದಲ್ಲೇ ನೂರಾರು ನೋವು , ನಲಿವು,ಬವಣೆ, ಬದುಕು ಎಲ್ಲವೂ ಅಡಗಿದೆ.ಅದೆಂದೂ ಅರ್ಥವಾಗದ ಮೌನ."
"ಅಮ್ಮನೆಂದರೆ ನಿರಂತರ ಧ್ಯಾನ. ಆ ಧ್ಯಾನದಲ್ಲೊಂದು ನಿಶ್ಕಲ್ಮಶ ಪ್ರೀತಿಯಿದೆ,ಮಮತೆಯಿದೆ,ಶಾಂತಿಯಿದೆ,ಎಲ್ಲಕ್ಕೂ ಮೀರಿದೊಂದು ನೆಮ್ಮದಿಯಿದೆ.ಅದೆಂದೂ ಮುಗಿಯದ ಧ್ಯಾನ".
ಅಪ್ಪ ಮೌನ ಸನ್ಯಾಸಿಯಾದರೆ, ಅಮ್ಮ ನಿತ್ಯ ಧ್ಯಾನಸ್ಥೆ.
ಮಿಕ್ಕಿದ್ದೆಲ್ಲವನ್ನೂ ಈ ಚಿತ್ರಗಳೇ ಹೇಳಿಬಿಡುತ್ತವೆ.


- ಫಣೀಶ್ ದುದ್ದ

ಮಂಗಳವಾರ, ನವೆಂಬರ್ 14, 2017

ಕಾಡುವ_ಚೈಲ್ಡ್_ಹುಡ್ಡ್_ಪ್ರಶ್ನೆಗಳು

ಕಾಡುವ_ಚೈಲ್ಡ್_ಹುಡ್ಡ್_ಪ್ರಶ್ನೆಗಳು

ನಮ್ಮೂರಿನ ಜಾತ್ರೆಯ ಕಾರು, ವಾಟರ್ ಗನ್ನು, ಸಣ್ಣದೊಂದು ಫ್ಯಾನು. ಮೈಸೂರು ಎಕ್ಸಿಬಿಷನ್ ನ ವೀಡಿಯೋ ಗೇಮು, ದೆವ್ವದ ಮುಖವಾಡ, ಅಡುಗೆ ಸೆಟ್ಟು. ಮದುವೆ ಮಂಟಪದ ಮುಂದೆ ಮಾರುವ ಬಲೂನು,ಪೀಪಿ,ಗಿರಿಗಿಟ್ಟಲೆ. ಅಪ್ಪನ ಜೇಬಿಗೆ ಕತ್ತರಿ. ಬಾಲ್ಯದ ನೆನಪು.

“ನಮ್ಮೂರ್ ಧರ್ಮನ ಅಂಗಡಿಲಿ 20 ರೂಪಾಯಿಗೆ ಸಿಗುತ್ತೆ , ಇಲ್ಲಿ 50 ರೂಪಾಯಿ ಕೊಟ್ಟು ಯಾಕೆ ವೇಷ್ಟ್ ಮಾಡ್ತಿಯ, ಅಲ್ಲೇ ತೆಕ್ಕೊಡ್ತಿನಿ ಬಾ ", ಅಂತ ಒಂದು ನೂರೈವತ್ತು ಸರ್ತಿ ಹೇಳಿರಬಹುದು.
ಅಷ್ಟಾದರೂ ಪೀಡಿಸಿ ತೆಗೆದುಕೊಂಡ ಆಟಿಕೆಗಳು ಊರಿಗೆ ಬರುವ ತನಕ ಉಳಿದಿದ್ದರೆ ಹೆಚ್ಚು. ಇನ್ನು ಧರ್ಮನ ಅಂಗಡಿ ನೆನಪಲ್ಲೂ ಇರ್ತಿರಲ್ಲಿಲ್ಲ. 
 
ನಿಜಕ್ಕೂ ಆ ಧರ್ಮನ ಅಂಗಡಿ ಇತ್ತಾ ?, ಇದ್ರೂ ಎಲ್ಲಿತ್ತು ? ಈಗಲೂ ಇದ್ಯಾ ..ಇಲ್ಲಾ ಮುಚ್ಚೋಗಿದ್ಯಾ ? .. ಉತ್ತರ ಸಿಕ್ಕದೇ ಉಳಿದ ಚೈಲ್ಡ್ ಹುಡ್ ಪ್ರಶ್ನೆಗಳು.
#_ಹ್ಯಾಪಿ_ಮಕ್ಕಳ_ದಿನಾಚರಣೆ

- ಫಣೀಶ್ ದುದ್ದ

ಬುಧವಾರ, ಸೆಪ್ಟೆಂಬರ್ 20, 2017

ಕವಿತೆ ಹುಟ್ಟುವುದೇನು ?

ಕವಿತೆ ಹುಟ್ಟುವುದೇನು ?

ಎಂದೋ ಅಪರಾತ್ರಿಯಲ್ಲಿ ಕುಳಿತು
ಅರ್ಧಂಬರ್ಧ ಬರೆದ ಕವಿತೆಯ ಸಾಲುಗಳು
ಮತ್ತೆ ಮತ್ತೆ ಪೀಡಿಸುತ್ತಿವೆ
ನಮಗೆ ಮುಕ್ತಿ ಕೊಟ್ಟು ಬಿಡೆಂದು...

 
ಅಟ್ಟದ ಮೇಲೆ ಗೆದ್ದಲು ಹತ್ತಿದ ಪುಸ್ತಕವೊಂದು
ತನ್ನನ್ನು ತಾನೇ ಓದುತ್ತಿದೆ ,
ಮುಗಿಯದ ಕಥೆಯೊಂದನ್ನು
ಮತ್ತೆ ಮತ್ತೆ ನೆನಪಿಸುತ್ತಿದೆ.

 
ಮುನಿದು ಮೂಲೆಯಲಿ ಬಿದ್ದ
ಲೇಖನಿಯ ಶಾಯಿ ಮುಗಿದು
ಅದೆಷ್ಟು ಮಾಸವಾಯಿತೋ ...
ಕವಿತೆ ಹುಟ್ಟಿ ಅದ್ಯಾವ ಕಾಲವಾಯಿತೋ ...

 
ಖಾಲಿಹಾಳೆಯ ಪ್ರೀತಿ ಲೇಖನಿಯ ಕಡೆಗೆ
ಇದ್ದರಲ್ಲವೆ ತಾನೆ ಕವಿತೆ ಹುಟ್ಟುವುದಿಲ್ಲಿ ,
ಶಾಯಿಯಿದ್ದರೆ ಏನು .. ಪ್ರೀತಿ ಇಲ್ಲದ ಮೇಲೆ
ಕನಸು ಅರಳುವುದೇನು ? ಕವಿತೆ ಹುಟ್ಟುವುದೇನು ?

 
-ಫಣೀಶ್ ದುದ್ದ