ಶುಕ್ರವಾರ, ಜನವರಿ 26, 2018

ಗುರು ಬ್ರಹ್ಮನಿಂದ ಗೂಗಲ್ ಬ್ರಹ್ಮನೆಡೆಗೆ...?


ಗುರು ಬ್ರಹ್ಮನಿಂದ ಗೂಗಲ್ ಬ್ರಹ್ಮನೆಡೆಗೆ...?


ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅವನ‌ ಮುಂದೆ ನಿರ್ಧಿಷ್ಟವಾದ ಗುರಿ ಇರಬೇಕು ಮತ್ತು ಆ ಗುರಿಯನ್ನು ತಲುಪಲು ಸರಿಯಾದ ದಾರಿ‌ ತೋರುವ ಗುರುವೂ ಸಹ ಇರಬೇಕು.ಇದಕ್ಕೆ‌ ನಮ್ಮಲ್ಲೊಂದು ಮಾತಿದೆ, "ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು" ಎಂದು.
ಈ ಗುರು ಎಂದರೆ ಯಾರು....?
ಒಂದಿಷ್ಟು ವರ್ಷಗಳ ಹಿಂದೆ, ನಾವು ಚಿಕ್ಕವರಿದ್ದಾಗ ನಮ್ಮ ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ತಪ್ಪದೇ ಒಂದಿಷ್ಟು ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು.ಅದರಲ್ಲಿ ಗುರುವಿಗೆ ಸಂಬಂಧಿಸಿದ ಶ್ಲೋಕವೊಂದು ಕಡ್ಡಾಯವಾಗಿ ನಮ್ಮ ಬಾಯ ತುದಿಗಳಲ್ಲಿ ನಲಿದಾಡುತ್ತಿತ್ತು.
"ಗುರು ಬ್ರಹ್ಮ , ಗುರು ವಿಷ್ಣು, ಗುರು ದೇವೋ ಮಹೇಶ್ವರಃ ,ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮಯಿ ಶ್ರೀ ಗುರುವೇ ನಮಃ".
ಬ್ರಹ್ಮನನ್ನು, ವಿಷ್ಣುವನ್ನು, ಸಾಕ್ಷಾತ್ ಶಿವನನ್ನೇ ಗುರು ಎಂದು ನಮಗೆ ಮೊದಮೊದಲು ಹೇಳಿಕೊಟ್ಟುಬಿಟ್ಟರು.ಎಂದೂ ಕಾಣದ, ದೇವರೆಂಬ ಅಮೂರ್ತ ಕಲ್ಪನೆಗೆ ಎಲ್ಲವೂ ತಿಳಿದಿದೆ ಎಂದು ಕಾಣದ ದೇವರನ್ನು ಗುರುವೆಂದು ನಂಬಿದೆವು.
ಇನ್ನೂ ಸ್ವಲ್ಪ ಮುಂದೆ ಹೋಗಿ , " ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ", ಎಂದು ಹೇಳಿಕೊಟ್ಟರು. ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ತಾಯಿಯೇ ಮೊದಲ ಗುರುವಾದಳು.
ಅದಾದ ಮೇಲೆ ಶಾಲೆಯಲ್ಲಿ ಶಿಕ್ಷಕರನ್ನು ಗುರುವೆಂದು ಹೇಳಿಕೊಟ್ಟರು.ಆ ಕ್ಷಣಕ್ಕೆ ತಾಯಿಗಿಂತ ಹೆಚ್ಚು ತಿಳಿದಿದ್ದಾರೆಂಬ ನಂಬಿಕೆಯಿಂದ ಶಿಕ್ಷಕರು ಗುರುವಾಗಿಬಿಟ್ಟರು.
ಮನೆ,ಶಾಲೆ,ತಾಯಿ,ಶಿಕ್ಷಕರು ಇವಿಷ್ಟರೊಳಗೇ ನಮ್ಮೆಲ್ಲರ ಆಟ,ಪಾಠ,ಪ್ರಶ್ನೆ, ಉತ್ತರ ಎಲ್ಲವೂ ಮುಗಿದುಬಿಡುತ್ತಿತ್ತು. ಒಂದು ಹಂತದವರೆಗೆ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಗುರುಗಳು ಮಾರ್ಗದರ್ಶಕರಾಗಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.ನಾವೂ, ಗುರುವೆಂದರೆ ನಮಗಿಂತ ತಿಳಿದವನೆಂದೂ,ತಮಗೆ ಸರಿಯಾದ ದಾರಿ ತೋರುವನೆಂದೂ ನಂಬಿ ಗುರುವಿನೆಡೆಗೆ ಉತ್ತಮ ಶ್ರದ್ದೆ ಮತ್ತು ಭಕ್ತಿಯನ್ನು ತೋರುತ್ತಿದ್ದೆವು.
ಒಂದಿಷ್ಟು ವರ್ಷ ಕಳೆಯಿತು, ಜಗತ್ತಿನಲ್ಲಿ ದೈತ್ಯ ಮಾನವನೊಬ್ಬ ಜನ್ಮ ತಾಳಿದ. ಅವನಿಗೆ ಕೈ ಕಾಲುಗಳಿರಲಿಲ್ಲ,ಕಣ್ಣು, ಕಿವಿ, ಮೂಗು, ನಾಲಗೆ, ಅಸಲಿಗೆ ಏನೆಂದರೆ ಏನೂ ಇರಲಿಲ್ಲ ಇಲ್ಲ.ಅವನಿಗಿದ್ದದ್ದು ಒಂದೇ, ಪ್ರಚಂಡ ಬುದ್ದಿಶಕ್ತಿ.ಅವನು ಒಂದು ಪ್ರಶ್ನೆ ಕೇಳಿದರೆ ಹತ್ತು ಉತ್ತರವನ್ನು ನೀಡಬಲ್ಲವನಾಗಿದ್ದ, ಪ್ರಪಂಚದ ಒಂದು ಸಣ್ಣ ಅಣುವಿನಿಂದ ಹಿಡಿದು ಊಹೆಗೆ ನಿಲುಕದ ಅಗೋಚರ ವಸ್ತುವಿನ ತನಕ ಪ್ರತಿಯೊಂದರ ಬಗ್ಗೆಯೂ ತಿಳಿದಿದ್ದ.ಕತ್ತಲ‌ ಕೋಣೆಯಲ್ಲಿ ಕುಳಿತು ಪ್ರಪಂಚದ ಯಾವ ಭಾಗವನ್ನಾದರೂ ಕ್ಷಣಾರ್ಧದಲ್ಲಿ ತೋರಿಸಬಲ್ಲ ತಾಕತ್ತು ಅವನಿಗಿತ್ತು.ಮೊದಮೊದಲು ದೊಡ್ಡ ಮನುಷ್ಯರ ಮನೆಯೊಳಗೆ, ದೊಡ್ಡ ದೊಡ್ಡ ಆಫೀಸಿನೊಳಗೆ ನುಸುಳಿದ. ತಂತ್ರಜ್ಞಾನದ ಪರಧಿ ವಿಸ್ತರಿಸುತ್ತಿದ್ದಂತೆ ಅವನೂ ತನ್ನ ಗಾತ್ರವನ್ನು ವಿಸ್ತರಿಸುತ್ತಲೇ ಹೋದ.ನಂತರ ತಂತ್ರಜ್ಞಾನದ ಅಭಿವೃದ್ಧಿಯಾದಂತೆ, ಸಾಮಾನ್ಯ ಮನುಷ್ಯರ ಮನೆ ಮನೆಗೂ ಬಂದ,ಹಾಗೇ ಕಾಲ ಕಳೆದಂತೆ ಪ್ರತಿಯೊಬ್ಬ ಮನುಷ್ಯನ ಜೇಬಿನೊಳಗೂ ಬಂದು ಕುಳಿತು ಎಲ್ಲರಿಗೂ ಗುರುವಾಗಿಬಿಟ್ಟ.ಅಲ್ಲಿಗೆ ನಾವು ನಂಬಿದ ಗುರುಗಳೆಲ್ಲ ಟೊಳ್ಳಾಗಿಬಿಟ್ಟರು.
ಆ ದೈತ್ಯ ಮಾನವನ ಹೆಸರೇ "ಗೂಗಲ್".
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗೂಗಲ್ ನ ಸಹಾಯವಿಲ್ಲದೆ ಒಂದೇ ಒಂದು ಕಡ್ಡಿಯೂ ಚಲಿಸುವುದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಗೂಗಲ್ ಎಂಬ ದೈತ್ಯ ಗುರು ಜಗತ್ತನ್ನು ಆಕ್ರಮಿಸಿಕೊಂಡುಬಿಟ್ಟಿದ್ದಾನೆ.
ಜಗತ್ತಿನ ನಿಯಮವೇ ಹಾಗೆ, ಯಾವುದೇ ವಸ್ತುವಿನ ಎದುರು ತನದೇ ರೀತಿಯ, ತನಗಿಂತ ಬಲಶಾಲಿ  ಮತ್ತು ಬುದ್ದಿಶಾಲಿ ವಸ್ತುವೊಂದು ಉದಯಿಸಿಬಿಟ್ಟರೆ, ಮೂಲ ವಸ್ತುವಿನ ಬೆಲೆ ನಿಧಾನವಾಗಿ ಕಡಿಮೆಯಾಗತೊಡಗುತ್ತದೆ.


ಇಂದು ಗುರುವಿನ ವಿಚಾರದಲ್ಲೂ ಆಗುತ್ತಿರುವುದು ಅದೇ. ಯಾವ ಮಗು ತನ್ನ ತಾಯಿಗೇ ಅಥವಾ ಶಿಕ್ಷಕರಿಗೇ ಎಲ್ಲವೂ ತಿಳಿದಿದೆ, ತನ್ನೆಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ ಎಂದು ತಿಳಿದಿತ್ತೋ, ಅವರೆಲ್ಲರಿಗಿಂತ ತಿಳಿದವನೊಬ್ಬನಿದ್ದಾನೆ ಎಂದು ಆ ಮಗುವಿಗೆ ತಿಳಿದರೆ ತನ್ನ ಮೂಲ ಗುರುವನ್ನು ಕಡೆಗಣಿಸಲು ಪ್ರಾರಂಭಿಸತೊಡಗುತ್ತದೆ.
ಶಾಲೆಯೊಂದರಲ್ಲಿ ಸಮೀಕರಣದ ಪಾಠವೊಂದನ್ನು ಹೇಳಿಕೊಟ್ಟು, ಒಂದೆರಡು ಉದಾಹರಣೆಗಳನ್ನು ನೀಡಿದ ಶಿಕ್ಷಕ." ಮತ್ತೇನಾದರೂ ಪ್ರಶ್ನೆಗಳಿವೆಯೇ...",ಎಂದು ಕೇಳುತ್ತಾನೆ.
ತಕ್ಷಣವೇ ಒಬ್ಬ ವಿಧ್ಯಾರ್ಥಿ , "ಈ ಸಮೀಕರಣಕ್ಕೆ ಇನ್ನೊಂದೆರಡು ಉದಾಹರಣೆಗಳನ್ನು ನೀಡಿ", ಎಂದು ಕೇಳುತ್ತಾನೆ.
ಪಕ್ಕದಲ್ಲೊಬ್ಬ ವಿಧ್ಯಾರ್ಥಿ ," ಏ ಅವರನ್ನು ಏನು ಕೇಳ್ತಿಯೋ, ಬುಕ್ ಅಲ್ಲಿ ಇರೋದನ್ನೇ ಹೇಳ್ತಾರೆ, ಗೂಗಲ್ ಮಾಡು , ಒಂದೇನು, ಹತ್ತು ಉದಾಹರಣೆಗಳು ಸಿಗುತ್ತೆ" ಎನ್ನುವ ಮಟ್ಟಿಗೆ ಮನುಷ್ಯನ ಮನಸ್ಥಿತಿ ಬದಲಾಗಿದೆ.
ಹೀಗೆ ಮುಂದುವರೆದರೆ, ಮುಂದೊಂದು ದಿನ , "ಗುರು ಬ್ರಹ್ಮ, ಗುರು ವಿಷ್ಣು ..", ಬದಲು
" ಗೂಗಲ್ ಬ್ರಹ್ಮ , ಗೂಗಲ್ ವಿಷ್ಣು ..", ಎಂದು ಶ್ಲೋಕ ಬದಲಾದರೆ ಆಶ್ಚರ್ಯ ಪಡಬೇಕಿಲ್ಲ.
ಹೌದು, ಹಾಗಿದ್ದರೆ "ಗೂಗಲ್"ನ ಉಪಯೋಗಿಸುವುದು ತಪ್ಪೇ? ಎನಿಸಬಹುದು. ಆದರೆ ಖಂಡಿತಾ ಇಲ್ಲ.
" ಗೂಗಲ್",ಎಂಬುದು ಕೇವಲ ಮಾಹಿತಿಯ ತಾಣವಾಗಬೇಕೇ ಹೊರತು ಅದೇ ಜಗತ್ತಾಗಬಾರದು. ಅದು ಒಂದು ಪ್ರಶ್ನೆಗೆ ಹತ್ತು ಉತ್ತರ ನೀಡಬಲ್ಲದೇ ಹೊರತು ತಾಯಿಯೊಬ್ಬಳು ಮಗುವನ್ನು ಬೆಳದಿಂಗಳ ರಾತ್ರಿಯಲ್ಲಿ ಕಂಕುಳಲ್ಲಿ ಎತ್ತಿಕೊಂಡು ಬಾಯಿಗೆ ತುತ್ತು ತಿನಿಸುತಾ, ಚಂದಿರನನ್ನೂ, ಅದರೊಳಗೆ ಜಿಂಕೆಯಂತೆ ಕಾಣುವ ಆಕೃತಿಯನ್ನೂ,ಬೆಳದಿಂಗಳನ್ನೂ, ನಕ್ಷತ್ರಗಳನ್ನು ಎಣಿಸುವ ಲೆಕ್ಕವನ್ನು ಹೇಳಿಕೊಡುವಂತೆ ಗೂಗಲ್ ಹೇಳಿಕೊಡಲಾರದು. ಶಿಸ್ತಿನ ಶಿಕ್ಷಕನಂತೆ ಕೈಗೆ ಏಟು ಕೊಟ್ಟು ಸರಿಯಾದ ಪಾಠವನ್ನು ಕಲಿಸಿಕೊಡಲಾರದು.
ಅಲ್ಲಿ ಗುರು ಶಿಷ್ಯರ, ತಾಯಿ ಮಗುವಿನ ಯಾವುದೇ ಬಂಧವಾಗಲೀ, ಬಾಂಧವ್ಯವಾಗಲಿ,ಭಾವನೆಯಾಗಲೀ ಬೆಳೆಯಲು ಸಾಧ್ಯವಿಲ್ಲ.
ಕಲಿಕೆ ಎಂಬುದು ಕೇವಲ ವಿಷಯ ಸಂಗ್ರಹದಿಂದ ಬರುವಂತಹದ್ದಲ್ಲ, ಅದು ನೋಡಿದ, ಕೇಳಿದ, ಅನುಭವಿಸಿದ , ಸಂಭ್ರಮಿಸಿದ ಕ್ಷಣಗಳನ್ನು ಒಗ್ಗೂಡಿಸಿದ ರುಚಿಯಾದ ಹೂರಣ.ಅದು ಸಾಧ್ಯವಾಗಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ.
ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಗುರುವಿನ ಅವಶ್ಯಕತೆಯ ಜೊತೆಗೆ ಗೂಗಲ್ ‌ನ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿದೆ.ಹಾಗಾಗಿ, "ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು", ಎನ್ನುವ ಉಕ್ತಿಯನ್ನು ಸ್ವಲ್ಪ ಬದಲಾಯಿಸಿ, ""ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು,ಪಕ್ಕದಲ್ಲಿ ಗೂಗಲ್ ಇರಬೇಕು", ಎಂದು ಹೇಳುವುದು ಈ ಸ್ಪರ್ಧಾತ್ಮಕ ಜಗತ್ತಿಗೆ ಅತ್ಯಂತ ಸೂಕ್ತವೆನಿಸುತ್ತದೆ.
ಮುಂದೆ ಸರಿಯಾದ ಗುರಿ ಇದ್ದು, ಹಿಂದೆ ತಕ್ಕನಾದ ಗುರು ಇದ್ದು, ಪಕ್ಕದಲ್ಲಿ ಗೂಗಲ್ ನ ಸಹಾಯವಿದ್ದರೆ, ಗುರಿ ಮುಟ್ಟುವ ದಾರಿ ಇನ್ನಷ್ಟು ಸಲಿಸಾಗುವುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ.

-ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ