ಶನಿವಾರ, ಜನವರಿ 7, 2017

ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ತಿಳಿಯದಾಗಿದೆ ನಿನ್ನ ತಲುಪುವಾ ದಾರಿ...


ಇಳಿ ಸಂಜೆ ಕಳೆದು ನಡುರಾತ್ರಿ ಸರಿದು
ಬೆಳಕಾಗಿ ಹುಟ್ಟುವುದು ನೀ ಹುಟ್ಟಿದಾ ದಿನ
ಹೊಂಗಿರಣ ಧರೆಯನ್ನು ಮುತ್ತಿಡುವ ಮುನ್ನ
ತಿಳಿಸಬೇಕಿದೆ ನಿನಗೆ ಪುಟ್ಟ ಶುಭಾಶಯವೊಂದ

ಬಣ್ಣದಾಟವ ಮುಗಿಸಿ ಬಾನಂಚಿನಲ್ಲಿ ನಿಂತ
ರವಿಯನ್ನು ಕೇಳಿದೆ ತಿಳಿಸೆನ್ನ ಶುಭಾಶಯವ
ತಾರುಣ್ಯ ಗೀತೆಯ ತಾಳ ತಿಳಿಯದೆನಗೆಂದು
ತಿರುಗಿ ನೋಡದೇ ಇಳಿದ ಅಬ್ದಿಯಾ ಒಳಗೆ

ನಗೆಮೊಗದ ಚಂದಿರ ನಗುನಗುತ ಬಂದ
ನಾಚುತಲಿ ನಸುನಗುವ ತಾರೆಗಳ ನಡುವೆ
ಚೆಂದದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಕೇಳಿದೊಡೆ ಮರೆಯಾದ ಮೋಡಗಳ ಹಿಂದೆ

ಇರುಳನ್ನು ಮುರಿದು ಮುಂಜಾವು ಹರಿದು
ಮೂಡಿತು ಮುದ್ದಾದ ಮಂಜಿನಾ ಹನಿಯು
ಮೌನದಿ ಕೇಳಿದೆ ತಿಳಿಸೆನ್ನ ಶುಭಾಶಯವ
ಜಾರಿತು ಜೀಕುತ ಹನಿಯೊಡೆದು ನೀರಾಗಿ

ಮರುಮಾತು ಮೂಡದೇ ಮೌನದಿ ಕುಳಿತಾಗ
ಹೊರಟಿತು ತಂಗಾಳಿ ಶುಭಾಶಯವ ಕೋರಿ
ಅರಸುತಿದೆ ಮನಸು ಗಾಳಿ ಹೆಜ್ಜೆಯಾ ಹಾದಿ 
ತಿಳಿಯದಾಗಿದೆ ನಿನ್ನ ತಲುಪುವಾ ದಾರಿ


                                   - ಫಣೀಶ್ ದುದ್ದ

ಬುಧವಾರ, ಜನವರಿ 4, 2017

ಕಲ್ಲು ಮಂಟಪ

 ಕಲ್ಲು ಮಂಟಪ


“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ..?
ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯಲ್ಲಿ ಸಿಕ್ಕಿದ್ದು ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ ಮಂಟಪದ ಕಂಬಕ್ಕೊರಗಿ ಕೂರೋ ದರ್ದಾದರೂ ನನಗೆ ಏನಿತ್ತು..?"
ಮೇಲೆ ನಾಲ್ಕು ಗುಡ್ಡ ಹತ್ತಿದರೆ ಶೇಷ ಪರ್ವತ, ಇನ್ನೂ ಮುಂದಕ್ಕೆ ಕುಮಾರ ಪರ್ವತ, ಎಡಗಡೆಗೆ ನೋಡಿದಷ್ಟುದ್ದಕ್ಕೂ ಪರ್ವತಗಳ ಸಾಲು, ಬಲಗಡೆಗೆ ನಾಲ್ಕು ಗುಡ್ಡ ಹತ್ತಿ, ಇಳಿದರೆ ಈ ಗುಡ್ಡಗಳು ಮತ್ತು ಕಾಡನ್ನು ಬೇರ್ಪಡಿಸುವ ಭಟ್ಟರ ಒಂಟಿ ಮನೆ. ಇವೆಲ್ಲದರ ನಡುವೆ ಒಂಟಿಯಾಗಿ ನಿಂತಿರುವ ಕಲ್ಲು ಮಂಟಪ.
"ಮನೆಯ ಎಲ್ಲಾ ಸುಖ, ನೆಮ್ಮದಿಗಳನ್ನು ಬಿಟ್ಟು, ಇಲ್ಲಿ ಬಂದು ಈ ಕಂಬಕ್ಕೊರಗಬೇಕಾಗಿತ್ತಾ..?
ಒಂದೆರಡು ಬಾರಿಯಾದರೆ ಸರಿ, ಅದೆಷ್ಟು ಬಾರಿ... ಲೆಕ್ಕವಿಲ್ಲದಷ್ಟು... ದಿನಗಟ್ಟಲೇ.. ಒಮ್ಮೊಮ್ಮೆ ವಾರಗಟ್ಟಲೆ...”
"ಅದೇಕೆ ಇಲ್ಲಿಗೆ ಬರಲು ಪ್ರಾರಂಭ ಮಾಡಿದೆ ಎಂದು ಮಾತ್ರ ಗೊತ್ತಿಲ್ಲ, ಆದರೆ ಈ ಕಲ್ಲು ಮಂಟಪದ ಕಂಬಕ್ಕೊರಗಿ, ಒಂದು ನಿಮಿಷ ಕಣ್ಣು ಮುಚ್ಚಿದರೆ ಸಾಕು, ಮನಸ್ಸಿಗೆ ಅದೆಂತಾ ನೆಮ್ಮದಿ. ಮನಸ್ಸಿನಲ್ಲಿ ಅದೆಷ್ಟು ತಳಮಳವಿದ್ದರೂ, ಅದೇನು ಮಾಯೆಯೋ, ಇಲ್ಲಿಗೆ ಬಂದೊಡನೆ ಪ್ರಶಾಂತವಾಗಿಬಿಡುತ್ತಿತ್ತು. ಮೊದಲೆರಡು ಬಾರಿ ಪೂರ್ತಿಯಾಗಿ ಕುಮಾರ ಪರ್ವತದ ತುದಿಯವರೆಗೂ ಹತ್ತಿದ್ದು ಬಿಟ್ಟರೆ, ಆ ನಂತರ ಇಲ್ಲಿಂದ ಮುಂದೆ ಹೋಗಲೇ ಇಲ್ಲ... “
"ಈಗ ಅನ್ನಿಸುತ್ತಿದೆ, ಅಂದು ನಾನು ಇಲ್ಲಿಗೆ ಬರದೇ ಹೋಗಿದ್ದಿದ್ದರೇ ಚೆನ್ನಾಗಿರುತ್ತಿತ್ತೇನೋ...”
"ಇಲ್ಲೇ ತಾನೇ ಅವಳು ನನಗೆ ಸಿಕ್ಕಿದ್ದು, ಇದೇ ಕಲ್ಲು ಮಂಟಪದ ಕಂಬಕ್ಕೊರಗಿದ್ದಾಗಲೇ ತಾನೆ ಅವಳು ಏದುಸಿರು ಬಿಡುತ್ತಾ ಬಂದು, ನನ್ನ ಇರುವಿಕೆಯನ್ನು ಗಮನಿಸದೇ, ಕಂಬದ ಇನ್ನೊಂದು ಬದಿಗೊರಗಿದ್ದು, ಆ ತಂಪಾದ ಗಾಳಿಗೆ, ಅವಳ ಕೂದಲು ನನ್ನ ಮುಖಕ್ಕೆ ಕಚಗುಳಿಯಿಟ್ಟಿದ್ದು, ಹೆಸರಿಗೆ ತಕ್ಕ ಬಿಳಿ ಮೈಬಣ್ಣ , ಎಂತಹವರನ್ನು ಮೋಡಿ ಮಾಡುವ ಕೆನ್ನೆಗುಳಿ ಮುಖ.... ಅವತ್ತೇ ಅಲ್ಲವೇ ನನ್ನ ನೆಮ್ಮದಿ ಕವಲೊಡಿದಿದ್ದು .. ಶಾಂತ ಸರೋವರದಂತಿದ್ದ ನನ್ನ ಮನಸ್ಸಿನಲ್ಲಿ ಪ್ರೀತಿಯ ಅಲೆ ಮೂಡಿದ್ದು ..”.

"ಎಷ್ಟೋ ವರ್ಷದ ಹಿಂದೆ ಕುಮಾರ ಪರ್ವತದ ತುದಿಯವರೆಗೂ ಹೋದ ನಾನು , ಅಂದು ಮಂತ್ರಮುಗ್ದನಾಗಿ ಅವಳ ಹಿಂದೆ ಹೋಗಿದ್ದೆ. ಅವಳು ಚಾರಣಕ್ಕೆ ಬಂದವಳು. ಯಾವ ಚಾರಣಿಗರೊಂದಿಗೂ ಮಾತನಾಡದ ನಾನು ಅಂದು ನಾನೇ ಅವಳ ಜೊತೆ ಮಾತನಾಡಲು ಪ್ರಾರಂಭಿಸಿದೆ. ಶೇಷ ಪರ್ವತದ ತುದಿಯಲ್ಲಿ ಮೋಡಗಳ ನಡುವೆ ನಿಂತು "ಹಾಯ್", ಎಂದು ಶುರುವಾದ ಗೆಳೆತನ, ಕುಮಾರ ಪರ್ವತವನ್ನು ಹತ್ತಿ , ಮತ್ತೆ ಕಲ್ಲು ಮಂಟಪದ ಬಳಿ ಬರುವುದರೊಳಗೆ, ನಾನು ನನ್ನ ಮನಸ್ಸನ್ನು ಅವಳಿಗೆ ಕೊಟ್ಟಿದ್ದೆ, ಅವಳ ಫೋನ್ ನಂಬರ್ ನ್ನು ನನಗೆ ಕೊಟ್ಟಿದ್ದಳು.”

"ಮುಂದೆ ಇದೇ ಗೆಳೆತನ ಪ್ರೀತಿಯಾಗಿ ಬೆಳೆಯಲು ಹೆಚ್ಚೇನು ಸಮಯ ಬೇಕಾಗಲಿಲ್ಲ, ನನ್ನ ಈ ಹುಚ್ಚಾಟಗಳಿಗೆ ಅವಳನ್ನು ಪಾಲುಗಾರ್ತಿಯನ್ನಾಗಿ ಮಾಡಿಕೊಂಡು , ಮತ್ತೊಮ್ಮೆ ಅವಳನ್ನು ಇದೇ ಕಾಡು ಅಲೆಸಿ , ಒಮ್ಮೆ ಅವಳು ತಲೆ ನೋವೆಂದದ್ದಕ್ಕೆ ಭಟ್ಟರ ಮನೆಯಲ್ಲಿ ಕಷಾಯ ಮಾಡಿಸಿಕೊಟ್ಟು , ಇದೇ ಕಲ್ಲು ಮಂಟಪದ ಕಂಬಕ್ಕೊರಗಿ , ನಾನು ಪೂರ್ವದ ದಿಗಂತವನ್ನು ನೋಡುತ್ತಾ , ಅವಳು ದಕ್ಷಿಣದ ಪರ್ವತ ಶ್ರೇಣಿಗಳನ್ನು ನೋಡುತ್ತಾ , ನಮ್ಮ ಜೀವನದ ಕನಸು ಕಟ್ಟಿದ್ದು. ನನ್ನ ಹೆಸರನ್ನು ಅವಳು , ಅವಳ ಹೆಸರನ್ನು ನಾನು , ಅದೆಷ್ಟು ಬಾರಿ ಕೂಗಿ , ಈ ಪರ್ವತ ರಾಶಿಗಳ ಮಧ್ಯೆ ಅದರ ಪ್ರತಿ ಧ್ವನಿಯನ್ನು ಕೇಳಿದ್ದು".

"ಅವತ್ತೇ ನನ್ನ ಪ್ರಶಾಂತವಾದ ಮನಸ್ಸಿನಲ್ಲಿ ಆ ಪ್ರತಿಧ್ವನಿಯ ಅಲೆಗಳ ಅಬ್ಭರ ಹೆಚ್ಚಾದ ಸುಳಿವು ಸಿಕ್ಕಿತ್ತು".

" ಮುಂದೆ , ಮತ್ತೆ ಮತ್ತೆ ಮನಸ್ಸಿನ ತಲ್ಲಣ ಹೆಚ್ಚುತ್ತಲೇ ಹೋಯಿತು. ಆದರೆ ಅಂದು ಮಾತ್ರ , ಅದೇನಾಯಿತೋ ... ಅಂದು ಇದ್ದಕ್ಕಿದ್ದಂತೆ ಇಲ್ಲಿಗೆ ಹೊರಟೆ , ಎಂದೂ ಬೇಡವೆನ್ನದಿದ್ದ ಅಮ್ಮ , ಅಂದು ಅದೆಷ್ಟು ಬೇಡವೆಂದರೂ ಇಲ್ಲಿಗೆ ಬಂದೆ , ನನ್ನವಳನ್ನೂ ಕರೆದೆ , ಮತ್ತೆ ತಲೆ ನೋವು ಹೆಚ್ಚಾಗಿದೆಯೆಂದು ಬರುವುದಿಲ್ಲವೆಂದಳು".

"ಆದರೆ , ಮೊದಲ ಬಾರಿ ಬಂದು ಕಂಬಕ್ಕೊರಗಿ ಪ್ರಶಾಂತವಾಗಿ ಕುಳಿತಂತೆ ಅಂದು ಕುಳಿತುಕೊಳ್ಳಲಾಗಲಿಲ್ಲ.”
" ಸರೋವರ ಸಮುದ್ರದಂತಾಗಿ , ಅಲೆಗಳು ತೀರದ ಬಂಡೆಗಪ್ಪಳಿಸಿದ್ದವು. ಮನಸ್ಸಿನಲ್ಲಿ ನಡುಕ ಶುರುವಾಗಿತ್ತು. ಅದೇಕೋ ಒಂದು ನಿಮಿಷವೂ ಅಲ್ಲಿರಲಾಗಲಿಲ್ಲ, ಹೊರಟೇಬಿಟ್ಟೆ".

"ಅವಳ ಸಣ್ಣ ತಲೆನೋವು ಕೇವಲ ತಲೆನೋವಾಗಿ ಉಳಿದಿರಲಿಲ್ಲ. ಮೆದುಳಿನ ಜ್ವರವಾಗಿ ಅವಳನ್ನೇ ಆಹುತಿ ತೆಗೆದುಕೊಂಡಿತ್ತು".
"ಅಂದು ಪರ್ವತ ರಾಶಿಗಳ ಮಧ್ಯೆ ಕೇಳಿದ ಅವಳ ಪ್ರತಿಧ್ವನಿ ಕ಼ೀಣಿಸಿತ್ತು".

"ಶಾಂತ ಸರೋವರದಂತಿದ್ದ ಮನಸ್ಸನ್ನು , ಇನ್ನೊಂದು ಶಾಂತವಾಗದಂತೆ ಮಾಡಿ ಹೋಗಿದ್ದಳು”.

"ಈಗ ಮತ್ತದೇ ನೆಮ್ಮದಿಯನ್ನು ಹುಡುಕುತ್ತಾ , ಈ ಕಂಬಕ್ಕೊರಗಿ ಕುಳಿತಿದ್ದೇನೆ... “

ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಕಡಲು ಭೋರ್ಗರೆಯುತ್ತಿದೆ. ಇವೆಲ್ಲವನ್ನು ನೋಡುತ್ತಾ ಶಾಂತವಾಗಿ ನಿರ್ಲಿಪ್ತತೆಯಿಂದ ನಿಂತಿದೆ ಕಲ್ಲು ಮಂಟಪ.


- ಫಣೀಶ್ ದುದ್ದ

ಮೌನದಾ ಮಾತು...



ಮೌನದಾ ಮಾತು...


ಮೌನ ತುಂಬಿದ ಮನದಿ ಮುಗಿಯದಾ ಮಾತು
ಕಾಡುವಾ ಕನಸುಗಳ ಜೊತೆ ಮಾಸದಾ ನೆನಪುಗಳು
ಅನಿಸಿದ್ದೆಲ್ಲವ ಬಿಡದೆ ಬರೆಯುವಾ ಬಯಕೆ
ಬರವಣಿಗೆಯ ಮರೆಸುತಿದೆ ಲೇಖನಿಯ ಮುನಿಸು
ಬರೆಯದೇ ಉಳಿದಿದೆ ಆ ಮೌನದಾ ಮಾತು


                        - ಫಣೀಶ್ ದುದ್ದ

ಬುಧವಾರ, ನವೆಂಬರ್ 30, 2016

ಬರೆಯಲಾರದೆ ಹೋದೆ ನಿನಗೊಂದು ಸಾಲೊಂದ...


ಬರೆಯಲಾರದೆ ಹೋದೆ ನಿನಗೊಂದು ಸಾಲೊಂದ...

ಹುಡುಕಿ ಹುಡುಕಿ ಸೋತೆ ನಾ ಹುಡುಗಿ
ಹುಟ್ಟುಹಬ್ಬಕ್ಕೊಂದು ಪುಟ್ಟ ಉಡುಗೊರೆಯ
ಅಂಗಾಲು ಸವೆದಿದೆ , ಮನ ಸೋತು ನಿಂತಿದೆ
ಸಮಸ್ತವೂ ನಿನ್ನ ಮುಂದೆ ಸಣ್ಣದಾಗಿದೆ

ಮುಗಿಲ ಕಾರ್ಮೋಡ ಕಣ್ತುಂಬ ತುಂಬಿ
ಧರೆಯಂತೆ ಧ್ಯಾನದಿ ಕಣ್ಮುಚ್ಚಿ ಕುಳಿತೆ
ಕಿವಿಯಿಟ್ಟು ಕೇಳಿದೆ ಮನದಂಚಿನ ಆಸೆಯ
ಮನಬಿಚ್ಚಿ ಹೇಳಿತು ಬರೆ ಒಂದು ಕವಿತೆಯ

ನೂರಾರು ಸಾಲನ್ನು ನೀರಂತೆ ಬರೆದ ಕೈ
ನಡುವಲ್ಲೆ ನಿಂತಿತು ಸುಡುಬಯಲ ನಡುವೆ
ಸಾಲದೇ ಹೋಯಿತು ವ್ಯಾಕರಣ ಮುಗಿದು
ಪದಗಳೇ ಸಿಗದಂತೆ ನಿನ್ನ ಹೊಗಳಲು ಇಂದು

ಹುಡುಕಲಾರದೇ ಸೋತೆ ಪುಟ್ಟ ಉಡುಗೊರೆಯೊಂದ
ಬರೆಯಲಾರದೆ ಹೋದೆ ಸೊಗಸಾದ ಸಾಲೊಂದ
ಬರಡಾದ ಮನಸಿನ ಶೂನ್ಯ ಭಾವವ ಕಳೆದು
ಕ್ಷಮಿಸು ನೀ ನನ್ನನ್ನು ತುಂಬು ಮನದಿಂದ


                            -ಫಣೀಶ್ ದುದ್ದ

ಶುಕ್ರವಾರ, ನವೆಂಬರ್ 18, 2016

ರೆಕ್ಕೆ - ಬೇರು


ರೆಕ್ಕೆ - ಬೇರು




ಸುಮಾರು ವರ್ಷಗಳ ಹಿಂದೆ ಪ್ರಜಾವಾಣಿ ಪತ್ರಿಕೆಯಲ್ಲಿ ನಾಗತೀಹಳ್ಳಿ ಚಂದ್ರಶೇಖರ್ ಅವರ ರೆಕ್ಕೆ - ಬೇರು ಎಂಬ ಒಂದು ಅಂಕಣ ಓದಿದ ನೆನಪು. ಈಗಲೂ ಆ ಅಂಕಣ ಪ್ರಕಟವಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ , ನಾನು ಇತ್ತೀಚೆಗೆ ಅದರ ಕಡೆ ಹೆಚ್ಚಾಗಿ ಗಮನ ಕೊಟ್ಟಿಲ್ಲ. ಆದರೆ ಮೊನ್ನೆ ಅವರದೇ ನಿರ್ದೇಶನ ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ರೆಕ್ಕೆ ಬೇರುಗಳ ಕುರಿತಾದ ಪುಟ್ಟ ಚರ್ಚೆ ನೋಡುವಾಗ ಆ ಅಂಕಣ ನೆನಪಿಗೆ ಬಂತು.

ಆ ಅಂಕಣಕ್ಕೆ ರೆಕ್ಕೆ ಬೇರು ಎಂದು ಏಕೆ ಹೆಸರಿಟ್ಟಿದ್ದರು ಎಂದು ಬಹಳ ಯೋಚಿಸುತ್ತಿದ್ದೆ.

ಈ ರೆಕ್ಕೆಗೂ ಬೇರಿಗೂ ಎತ್ತಣಿಂದೆತ್ತ ಸಂಬಂಧ ..?

ರೆಕ್ಕೆ ಇದ್ದಲ್ಲಿ ಬೇರು ಬಿಡಲು ಎಲ್ಲಿ ಸಾಧ್ಯ ..? ಅಥವಾ ಬೇರು ಬಿಟ್ಟರೆ ರೆಕ್ಕೆ ಇದ್ದು ತಾನೆ ಏನು ಪ್ರಯೋಜನ ..?

ಆ ಸಿನಿಮಾವನ್ನು ಹಿಂದೊಮ್ಮೆ ನೋಡಿದ್ದರೂ , ಮೊನ್ನೆ ಮತ್ತೆ ನೋಡಿದಾಗಿನಿಂದ ಆ ಪ್ರಶ್ನೆ ಮನದೊಳಗೆ ಒಂದೇ ಸಮನೆ ಕಾಡುತ್ತಿದೆ.

ಹೌದು , ಮನುಷ್ಯನಿಗೆ ರೆಕ್ಕೆ ಇರಬೇಕಾ ..? ಬೇರು ಇರಬೇಕಾ ..?

ತನಗೆ ರೆಕ್ಕೆ ಇರಬೇಕು , ಹಕ್ಕಿಗಳ ರೀತಿ ಬೆಟ್ಟ , ಗುಡ್ಡ , ನದಿ , ಸಮುದ್ರಗಳ ಮೇಲೆ ಸ್ವಛ್ಛಂದವಾಗಿ ಹಾರಾಡಬೇಕು , ವಿಶಾಲವಾದ ಈ ಪ್ರಪಂಚವನ್ನು ನೋಡಬೇಕು ಎನಿಸುವುದು ಎಷ್ಟು ಸಹಜವೋ , ಇದ್ದ ಜಾಗದಲ್ಲೇ ಆಳವಾಗಿ ಬೇರು ಬಿಟ್ಟು , ಇಲ್ಲೆ ಹೆಮ್ಮರವಾಗಿ ಬೆಳೆಯಬೇಕು , ನಮ್ಮ ಭೂಮಿಯ ರಸವನ್ನು ಹೀರಿ ಇಲ್ಲೇ ಫಲ ಕೊಡಬೇಕು , ಎನಿಸುವುದು ಅಷ್ಟೇ ಸಹಜ .

ಒಮ್ಮೆ ನಿಮಗೆ ನೀವೇ ಈ ಪ್ರಶ್ನೆ ಕೇಳಿ ನೋಡಿ.

ಮನುಷ್ಯನ ಮನಸ್ಸು ಮರ್ಕಟವಿದ್ದಂತೆ, ಒಮ್ಮೆ ಹೀಗನಿಸಿದರೆ, ಇನ್ನೊಮ್ಮೆ ಹಾಗನಿಸುತ್ತದೆ.
ಅದೆಲ್ಲಾ ಅವರವರ ಭಾವಕ್ಕೆ , ಅವರವರ ಭಕುತಿಗೆ ತಕ್ಕಂತೆ, ಜೊತೆಗೆ ಸಮಯಕ್ಕೆ ತಕ್ಕಂತೆ ಕೂಡ.

ಆದರೆ ಈ ರೆಕ್ಕೆ ಕಟ್ಟಿಕೊಂಡು ಎಷ್ಟು ದೂರ ತಾನೆ ಹಾರುವುದಕ್ಕಾಗುತ್ತದೆ ಹೇಳಿ ?.
ಬೇರು ಬಿಡಲಿಲ್ಲವೆಂದರೂ , ಒಂದಲ್ಲಾ ಒಂದು ದಿನ ಗೂಡನ್ನಾದರೂ ಕಟ್ಟಲೇಬೇಕು. ಆಗ ಬೇಕಾಗುವುದು ಆಳವಾಗಿ ಬೇರೂರಿ ಬೆಳೆದಿರುವ ಹೆಮ್ಮರವೇ ಹೊರೆತು , ರೆಕ್ಕೆಗಳಲ್ಲ.

ಈ ರೆಕ್ಕೆಗಳನ್ನು ಕಟ್ಟಿಕೊಂಡು ಅದೆಷ್ಟು ದೂರ ಹಾರುತ್ತೇನೋ ಗೊತ್ತಿಲ್ಲ. ಆದರೆ ರೆಕ್ಕೆ ಕಟ್ಟಿಕೊಂಡು ಹಾರಿ ಬಂದವರಿಗೆ , ಗೂಡು ಕಟ್ಟುವುದಕ್ಕಾದರೂ ಆಳವಾಗಿ ಬೇರು ಬಿಟ್ಟು , ಹೆಮ್ಮರವಾಗಿ ಬೆಳೆಯುವಾಸೆ.

- ಫಣೀಶ್ ದುದ್ದ

ಗುರುವಾರ, ನವೆಂಬರ್ 3, 2016

ಮುಗ್ಧ ಚೇತನ


ಮುಗ್ಧ ಚೇತನ




  ಶುಕ್ರವಾರ ಸಂಜೆ, ಆಗ ತಾನೆ ಆಫೀಸಿನಿಂದ ಮನೆಗೆ   ಬಂದು, "ಅಬ್ಬಾ ನಾಳೆ,ನಾಡಿದ್ದು ರಜೆ"ಎಂದು ಮನಸ್ಸಿನಲ್ಲಿಯೇ ಖುಷಿ ಪಡುತ್ತಿದ್ದಂತೆಯೇ ನನ್ನ ಫೋನು ರಿಂಗಣಿಸಿತು, ಯಾವುದೋ ಹೊಸ ನಂಬರ್, ಯಾರಿರಬಹುದು ಎಂದು ಫೋನ್ ರಿಸೀವ್ ಮಾಡಿ "ಹಲೋ.... ಯಾರು ಮಾತಾಡ್ತಾ ಇರೋದು " ಎಂದು ಕೇಳಿದಾಕ್ಷಣ,"ಹಲೋ.... ಅಭಿ ಅಣ್ಣನಾ ಮಾತಾಡ್ತಿರದು??"ಎಂದು ಎಲ್ಲೂ ಕೇಳಿದ ಧ್ವನಿ ಉತ್ತರಿಸಿತು.

"ಹೌದು ನಾನೇ ಮಾತಾಡ್ತಾ ಇರೋದು. ನೀವು ಯಾರು?" ಎಂದೆ.

"ಅಣ್ಣಾ ನಾನು ಚೇತನ್ ..ಗೊತ್ತಾಗ್ಲಿಲ್ವ?? "ಎಂದು ಆ ಪುಟ್ಟ ಧ್ವನಿ ಕೇಳಿತು.

ನಾನು "ಯಾರಿದು .. ಚೇತನ್?" ಎಂದು ಯೋಚಿಸುತ್ತಿರುವಾಗ ಥಟ್ಟನೆ "ಓಹೋ... ನಾನು ಬಾಡಿಗೆಗಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಎರಡನೇ ಕ್ಲಾಸ್ ಹುಡುಗ "ಎಂದು ನೆನಪಾದೊಡನೆ ,
"ಹಾಯ್ ಚೇತನ್ ಹೇಗಿದ್ದೀಯಾ? ಹರ್ಷಿತ,ಶರಣ್ಯ,ಶ್ವೇತ,ದರ್ಶನ್ ಎಲ್ಲರೂ ಹೇಗಿದ್ದಾರೆ " ಎಂದೆ.

"ಚೇತನ್", ನಾನು ವಾಸವಿದ್ದ ಹಳೆಯ ಮನೆಯ ಬಿಲ್ಡಿಂಗ್ ನಲ್ಲಿದ್ದ ಮಕ್ಕಳ ಗ್ಯಾಂಗ್ ನ ಲೀಡರ್ ತುಂಟ ಮತ್ತು ಮುಗ್ಧ ಹುಡುಗ.

ಹೀಗೆ ಒಂದು ಶನಿವಾರ ಸಂಜೆ ,ಎಂಟು ಗಂಟೆಗೇ ಊಟ ಮುಗಿಸಿ ಮನೆಗೆ ಬಂದು ಫ್ರೆಶ್ ಆಗಿ, ಕಿವಿಗಳಿಗೆ ಇಯರ್ ಫೋನ್ ಸಿಕ್ಕಿಸಿ,ಹೊರಗಡೆ ಓಡಾಡೋಣವೆಂದು ಹಾಗೆ ಮನೆಯ ಮುಂದೆ ಬಂದು, ಆ ಕಡೆ ,ಈ ಕಡೆ ಓಡಾಡುತ್ತಿರುವಾಗ, ರಸ್ತೆಯ ಆ ಬದಿಯಿಂದ ಒಬ್ಬ ಹುಡುಗ ಜೋರಾಗಿ ಸೈಕಲ್ ಓಡಿಸುತ್ತಾ ಬಂದು ಧಡ್ ಎಂದು ನಮ್ಮ ಮನೆಯ ಬಳಿ ಬಂದು ಬಿದ್ದ.
ತಕ್ಷಣ ಓಡಿ ಹೋಗಿ ಅವನನ್ನು ಹಾಗೂ ಅವನ ಮೇಲೆ ಬಿದ್ದಿದ್ದ ಸೈಕಲ್ಲನ್ನು ಮೇಲಕ್ಕೆತ್ತಿ, " ಏನಾದರೂ ಪೆಟ್ಟಾಯಿತೇ" ಎಂದು ಕೇಳಿದರೆ, "ಏನೂ ಆಗಿಲ್ಲ ಅಣ್ಣಾ ... ಈ ಥರ ಬೇಕಾದಷ್ಟು ಸಲ ಬಿದ್ದಿದ್ದೇನೆ " ಎಂದು ಮುಗ್ಧತೆಯಿಂದ ನಗುತ್ತಾ ಹೇಳಿದ.

ಹಾಗೇ ಮಾತನಾಡುತ್ತಾ ಅವನ ಹೆಸರು, ಸ್ಕೂಲು ಎಲ್ಲಾ ಕೇಳಿದ ಮೇಲೆ " ನಿಮ್ಮ ಮನೆ ಎಲ್ಲಿ? "ಎಂದೆ.

"ಅಯ್ಯೋ ಅಣ್ಣಾ .. ನಾವು ಈ ಬಿಲ್ಡಿಂಗ್ ನಲ್ಲೇ ಇರೋದು, ನೀವು ಯಾವತ್ತೂ ನನ್ನನ್ನು ನೋಡೇ ಇಲ್ವಾ?? " ಎಂದು ಕೇಳಿದ.

"ಇಲ್ಲಪ್ಪ, ನಾನು ಆಫೀಸಿನಿಂದ ಬರುವುದು ರಾತ್ರಿ ತುಂಬ ಹೊತ್ತಾಗುತ್ತೆ, ಹಾಗಾಗಿ ಯಾರನ್ನು ನೋಡಿಲ್ಲ " ಎಂದೆ.
 

"ನೀವು ಆಫೀಸ್ಗೆ ಹೋಗ್ತೀರಾ?? ಏನು ಕೆಲಸ ಮಾಡ್ತೀರಾ?" ಎಂದು ಮತ್ತೊಮ್ಮೆ ಪ್ರಶ್ನೆ ಕೇಳಿದ.

"ನಾನು ಸಾಫ್ಟ್ವೇರ್ ಇಂಜಿನಿಯರ್ "ಎಂದೆ.

" ಹಾಗಂದ್ರೆ..? ಅದೇ ಮನೆ ಕಟ್ಟುಸ್ತಾರಲ್ಲ? ಅವರಾ?? "ಎಂದ ಕೇಳಿದ.

ನಾನು ಮುಗುಳ್ನಕ್ಕು "ಅಲ್ಲಪ್ಪ, ನಿನಗೆ ಈಗ ಅದೆಲ್ಲ ಗೊತ್ತಾಗಲ್ಲ, ನೀನು ದೊಡ್ಡೋನಾದ ಮೇಲೆ ಗೊತ್ತಾಗುತ್ತೆ" , ಎಂದೆ.
"ಹಾಗಾದ್ರೆ ನಾನೂ ದೊಡ್ಡೋನಾದ್ಮೇಲೆ ಅದೇ ಆಗ್ತಿನಿ " ಎಂದ.

ನಾನು ಮತ್ತೊಮ್ಮೆ ಮುಗುಳ್ನಕ್ಕು "ಸರಿ ಈಗ ತುಂಬ ಹೊತ್ತಾಗಿದೆ,ಮನೆಗೆ ಹೋಗಿ ಊಟ ಮಾಡಿ ಮಲಗು " ಎಂದೆ.
ತಕ್ಷಣ "ಅಣ್ಣ ... ನೀವು ನಿಮ್ಮ ಹೆಸರೇ ಹೇಳಲೇ ಇಲ್ವಲ್ಲಾ " ಎಂದ. ನಾನು "ಅಭಿಲಾಷ್" ಎಂದೆ.

ಅದಕ್ಕೆ ಅವನು " ನಾನು ನಿಮ್ಮನ್ನು ಅಭಿ ಅಣ್ಣ ಅಂತ ಕರಿತೀನಿ.. ಓಕೇ ನಾ? " ಎಂದ. ನಾನು "ಸರಿ " ಎಂದೆ.
ಸೈಕಲ್ ನ್ನು ಕಾಂಪೌಂಡ್ ಒಳಗೆ ನಿಲ್ಲಿಸಿ ಮನೆಗೆ ಹೋದ.

ಹೀಗೆ ಪರಿಚಯವಾದ ಹುಡುಗ ಚೇತನ್ .

ಶನಿವಾರ, ಭಾನುವಾರ,ಅಥವಾ ನಾನೇನಾದರೂ ಆಫೀಸಿನಿಂದ ಬೇಗ ಮನೆಗೆ ಬಂದಿದ್ದರೆ ಮಾತನಾಡಲು ಸಿಗುತ್ತಿದ್ದ. ಆ ಮುಗ್ಧ ಮಾತಿಗೆ, ಅವನು ಕೇಳುತ್ತಿದ್ದ ತುಂಟ ಪ್ರಶ್ನೆಗಳಿಗೆ,ನನ್ನಲ್ಲಿ ಉತ್ತರವಿಲ್ಲದೇ ಹೋದರೂ,ಅವನ ಸಮಾಧಾನಕ್ಕೆ ಏನಾದರೊಂದನ್ನು ಹೇಳಿ ಸುಮ್ಮನಾಗುತ್ತಿದ್ದೆ. ಅವನು, ಅವನಷ್ಟೇ ಅಲ್ಲದೆ ನಮ್ಮ ಬಿಲ್ಡಿಂಗ್ ನ ಬೇರೆ ಬೇರೆ ಮಕ್ಕಳನ್ನು ಪರಿಚಯ ಮಾಡಿಸಿ " ಇವರು ಅಭಿ ಅಣ್ಣ ಅಂತ .. ನಮ್ಮ ಫ್ರೆಂಡ್" ಎಂದು ಎಲ್ಲರೂ ಹಾಗೆಯೇ ಕರೆಯಬೇಕು ಎಂದು ಹೇಳುತ್ತಿದ್ದ. ಹೀಗಾಗಿಯೇ ನನಗೆ ಹರ್ಷಿತಾ,ಶರಣ್ಯ ,ಶ್ವೇತ,ದರ್ಶನ್ ಎಲ್ಲರೂ ಪರಿಚಯ ಆಗಿಬಿಟ್ಟಿದ್ದರು. ಎಲ್ಲರೂ ಹೆಚ್ಚು ಕಡಿಮೆ ಅವನ ವಯಸ್ಸಿನವರೇ,ಆ ಬಿಲ್ಡಿಂಗ್ ನಲ್ಲಿ ಅಷ್ಟೊಂದು ಮಕ್ಕಳಿದ್ದಾರೆ ಎಂದು ಅಲ್ಲಿಯವರೆಗೆ ನನಗೆ ಗೊತ್ತೇ ಇರಲಿಲ್ಲ .

ಹೀಗೆ ಅವರೆಲ್ಲ ಪರಿಚಯವಾದ ಕೆಲವೇ ದಿನಗಳೊಳಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಹದಿನೈದು ದಿನ ಆಫೀಸಿಗೆ ರಜೆ ಹಾಕಿ ಊರಿಗೆ ಬಂದೆ,ನಂತರ ಡಾಕ್ಟರ್ ಒಂದು ತಿಂಗಳು ಹೊರಗಡೆ ಊಟ ಮಾಡಬೇಡಿ ಎಂದಿದ್ದರಿಂದ ನನ್ನ ಸಂಬಂಧಿಕರ ಮನೆಯಿಂದ ಆಫೀಸಿಗೆ ಹೋಗಿ ಬರುತ್ತಿದ್ದೆ.

ಶುಕ್ರವಾರ ಸಂಜೆ, ... ಫೋನು ರಿಂಗಣಿಸಿತು....

"ನೀವು ಮನೆಗೆ ಬಂದೇ ಇಲ್ವಲ್ಲಾ, ಓನರ್ ಹತ್ತಿರ ನಿಮ್ಮ ಫೋನ್ ನಂಬರ್ ತಗೊಂಡು, ಹೇಗಿದ್ದೀರಾ? ಅಂತ ಕೇಳಣಾ ಅಂತ ಫೋನ್ ಮಾಡಿದೆ... ನೀವು ಮನೆಗೆ ಬರಲ್ವಾ ಅಣ್ಣ?? "
ಎಂದಾಗ ನನಗೆ ಮಾತೇ ಹೊರಡದಂತಾಯಿತು.......

ಸಂಬಂಧಗಳಿಗೆ ಬೆಲೆಯೇ ಇಲ್ಲದ ಬಾಳ ಪಯಣದಲ್ಲಿ ಎಲ್ಲೆಲ್ಲಿಯ ಮೈತ್ರಿಯ ನಂಟೋ ? ಯಾರ್ಯಾರಲ್ಲಿ ಪ್ರೀತಿಯ ಋಣದ ಗಂಟೋ …?

                                                                                                    -ಫಣೀಶ್ ದುದ್ದ













ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?

ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?

ಕಣ್ಣಂಚಿನಲ್ಲಿ ಹೊರಟು ನಿಂತ ಕಣ್ಣೀರನ್ನೊಮ್ಮೆ ಕೇಳು
ಇಷ್ಟವಿಲ್ಲದಿದ್ದರೂ ಏಕೆ  ಹೊರಟಿರುವೆಯೆಂದು ?

ಕಂಬನಿ ತುಂಬಿದ ಆ ಕಣ್ಣಿನಿಂದೇಕೆ ನೋಡುವೆ?
ಕಾಣುವುದು ಬರಿ ನನ್ನ ಮಬ್ಬಾದ ಪ್ರತಿಬಿಂಬ

ಮಂಜಾಗಿರುವ ಕಣ್ಣನ್ನೊಮ್ಮೆ ಮುಚ್ಚಿ, ಬಿಟ್ಟುಬಿಡು
ಕಣ್ಣೀರು ಹೋಗಲಿ , ನೀ ಮಾತ್ರ ಉಳಿದುಬಿಡು

                                 - ಫಣೀಶ್ ದುದ್ದ