ಬುಧವಾರ, ಸೆಪ್ಟೆಂಬರ್ 20, 2017

ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....


ಕಾಲನ ಚಕ್ರ ಮೆಲ್ಲನೆ ತಿರುಗುತ್ತಿತ್ತು .....
 
ಬಡತನದ ಕುಲುಮೆಗೆ  ಸಿಕ್ಕ ಒಡಲು 
ಬೆಂದು ಬೆವರಿ ಬರಡಾಗಿತ್ತು,
ಕುಲುಮೆಯಲ್ಲೇ ಹುಟ್ಟಿದ ಕಲೆಯೊಂದು
ಮೇಲೆತ್ತುವವರಿಲ್ಲದೆ ಕಮರುತ್ತಿತ್ತು.

ಹಸಿವಿನ ಹೊಟ್ಟೆಗೆ ಹಿಟ್ಟನು ಬೇಡಿ 
ಕಂಡ ಕಂಡವರ ಕಾಲಿಗೆ ಬಿದ್ದಿತ್ತು,
ಕಾಲಲಿ ಒದ್ದ ಕುರುಡು ಕಾಂಚಾಣಕೆ
"ಕಾಲವೆ ಉತ್ತರಿಸಲಿದೆ",ಎಂದಿತ್ತು.  

ಒಡಲಿನ ಕಾವು ನುಡಿಸಿದ ಮಾತು
ಜಗಕೆ ಕಠುವಾಗಿ ಕೇಳಿತ್ತು ,
"ಬದುಕಿ ತೋರಿಸಿ ನೋಡು"ಎಂದು
ಜಗವೇ ಸವಾಲೆಸೆದಿತ್ತು.

ಊದುಕೊಳವೆಯ ಛಲದ ಉಸಿರಿಗೆ
ಕಲೆಯ ಕಿಡಿಯು  ಹೊತ್ತಿತ್ತು ,ಜ್ಯೋತಿ ಬೆಳಗಲು ಹತ್ತಿತು..
ಹಾಗೇ .. ಕಾಲವು ಸರಿದಿತ್ತು ..
ಕಲೆಯು ಬೆಳೆದಿತ್ತು, ಕವಿತೆಯಾಗಿತ್ತು

ಹೊಟ್ಟೆಯ ಹೊರೆಯಲು ಹೊತ್ತಿದ ಕಿಡಿಯು
ಹೊತ್ತಿಗೆಯಾಗಿತ್ತು ,ಜಗದ ಮಸ್ತಕ ಸೇರಿತ್ತು,
ಗೋಡೆಯ ಮೇಲಿನ ಕಾಲನ ಚಕ್ರ
ಮೆಲ್ಲನೆ ತಿರುಗುತ್ತಿತ್ತು ..


-ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ