ಗುರುವಾರ, ಮಾರ್ಚ್ 9, 2017

ನಮ್ಮೂರ ಬುದುಕು...

 ನಮ್ಮೂರ ಬುದುಕು...

ನಾವು ಚಿಕ್ಕವರಿದ್ದೆವು , ಎಲ್ಲಿಂದಲೂ ತಂದರು
ನಮ್ಮ ಮದುವೆ ಮಾಡಿದರು ,
ಊರ ಮುಂದೊಂದು ಮನೆಯ ಕಟ್ಟಿದರು
"ಅರಳಿಯ ಕಟ್ಟೆ"ಯೆಂದರು,
ಕಹಿಯೆಂದ ಮಾತ್ರಕ್ಕೆ ಅವಳನ್ನೆ ಮರೆತರು,
ಹೇಗೆ ಮರೆಯಲಿ ನನ್ನ ಬಾಳಿನಾ ಬೆಳಕಾ,
ಬೇವಿನಾ ಬದುಕ , ಕೂಡಿ ಹೇಳುವೆವು ನಾವು
ನಮ್ಮೂರ ಬುದುಕ...


ನಮಗಿಂತ ಹಿರಿಯ, ನೂರಾರು ಹರೆಯ
ಬೆನ್ನು ಮುರಿದು ಬಿದ್ದಿಹನು ಆ ಮೂಲೆಯಲ್ಲಿ
ನೀರಿದ್ದ ಹೊತ್ತು ಊರತುಂಬಾ ಗತ್ತು
ರಾಟೆಯಿಲ್ಲದ ಬಾವಿ, ನೀರು ಬತ್ತಿದ ಮೇಲೆ
ಕೇಳುವವರಿನ್ಯಾರು ಅವನಾ ವ್ಯಥೆಯ?


ಊರ ಒಳಗೊಂದು ಶಾನುಭೋಗರ ಮನೆ
ರೂಲು ಹಿಡಿಯಲೂ ಬರದ ಶ್ಯಾನ್ಬೋಗ ಚೆನ್ನಿಗ
ಘಟವಾಣಿ ಹೆಂಗಸು ಅವರಮ್ಮ ಗಂಗಮ್ಮ
ಮೂರೂ ಬಿಟ್ಟ ಗಂಡು ಮೂದೇವಿ ಅಪ್ಪಣ್ಣ
ಅಣ್ಣತಮ್ಮಂದಿರ ಅನುದಿನದ ಜಗಳದಿ 

ಶ್ಯಾನುಭೋಗರ ಶಯನ ಗೃಹವೇ ಭಂಗ

ಊರ ಹೊರಗೊಬ್ಬಳು ನನ್ನವಳ ಸವತಿ
ದೆವ್ವದ ಗೂಡಂತೆ ಅವಳ ಒಂಟಿಯಾ ಗೂಡು
ಸೊಗಸಾದ ಸಿಹಿಯಾದ ಹುಣಸೆಯಾ ಹಣ್ಣು
ಉಪ್ಪು ಮೆಣಸು ಜೀರಿಗೆಯ ಸೇರಿಸಿ
ಕುಟ್ಟುತಿವೆ ಮಕ್ಕಳು ಅವಳ ಅಂಗಳವ ಸೇರಿ


ಮಕ್ಕಳಾ ಕಂಡರೆ ಇವಳಿಗೂ ಪ್ರೀತಿ
ದೂರವೇ ಉಳಿದಿವೆ ಇವಳು ಕಹಿಯೆಂದು ಹೇಳಿ
ಆದರೂ ಬರುತಾವೆ ಒಮ್ಮೊಮ್ಮೆ ಇತ್ತ
ಅವರಮ್ಮ ಮುನಿದಾಗ ಸಿಡುಬು ಸೀತಾಳೆ ಹೊತ್ತು
ನೀಡುವಳು ನನ್ನವಳು ಪ್ರೀತಿಯಾ ತುತ್ತು


ಹೊನ್ನಮ್ಮ ದ್ಯಾವಮ್ಮ ನಮ್ಮೂರ ದೇವ್ರು
ಉಗಾದಿಯ ಮುನ್ನ ಊರಿನಾ ಜಾತ್ರೆ
ಊರಿನಾ ತುಂಬೆಲ್ಲ ತಳಿರಿನಾ ತೋರಣ
ಹೊರಡುವಾ ಮುನ್ನ ಅಡ್ಡೆಯಾ ಉತ್ಸವ
ಬರುವರು ನಮ್ಮ ಬಳಿ ಮರೆಯದೇ ಎಂದೂ


ನೂರಾರು ಮಕ್ಕಳಾ ಹುಟ್ಟನ್ನು ಕಂಡಿಹೆವು
ನೂರಾರು ಸಾವಿನಾ ಮೆರವಣಿಗೆಯ ನೋಡಿಹೆವು
ನೂರಾರು ವ್ಯಾಜ್ಯಕೆ ನಮ್ಮ ಮನೆಯೆ ಅಡ್ಡ
ನೂರಾರು ತೀರ್ಪಿಗೆ ನಾವಿಬ್ಬರೆ ಸಾಕ್ಷಿ
ನೂರಾರು ವರುಷದಿ ಬಾಳುತಿರುವೆವು ಇಲ್ಲಿ
ಹರುಷದಿ ಹೇಳುವೆವು ಇದು ನಮ್ಮಯ ಹಳ್ಳಿ


-ಫಣೀಶ್ ದುದ್ದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ