ಮುಂಗುರುಳು ಸರಿದಾಗ...
ಕಣ್ಣಿನ ರೆಪ್ಪೆಯ ತುದಿಯಲ್ಲಿ ಜೋತಾಡುತ್ತಿರುವ ಮುಂಗುರುಳನ್ನು ,ತಮ್ಮ ತೋರುಬೆರಳಿನಿಂದ ಹಾಗೇ .. ನಾಜೂಕಾಗಿ ಕಿವಿಯ ಹಿಂದೆ ಸರಿಸದಿದ್ದರೆ ಹುಡುಗಿಯರ ಬೆರಳಿಗೆ ಸಾರ್ಥಕತೆಯಿಲ್ಲ , ಮುಂಗುರುಳಿಗೆ ಮುಕ್ತಿಯಿಲ್ಲ.
ಅದೆಷ್ಟು ಬಾರಿ ಕಿವಿಯ ಹಿಂದೆ ಸೇರಿಸಿದರೂ , ಮತ್ತೆ ಮತ್ತೆ ಕಣ್ಣಿನ ರೆಪ್ಪೆಗೆ ಮುತ್ತಿಡುವ ಆಸೆ ಆ ಮುಂಗುರುಳಿಗೆ, ಅದನ್ನು ಮತ್ತೆ ಮತ್ತೆ ಕಿವಿಯ ಹಿಂದೆ ಸೇರಿಸುವ ಆಸೆ ಹುಡುಗಿಯರಿಗೆ.
ಈ ರೆಪ್ಪೆ ಮತ್ತು ಮುಂಗುರುಳಿನ ಪ್ರೀತಿಗೆ ಬಲಿಪಶುವಾದವರು ಮಾತ್ರ ಹುಡುಗರು. ಅಯಸ್ಕಾಂತಕ್ಕೆ ಅಷ್ಟು ಶಕ್ತಿ ಇದೆಯೋ , ಇಲ್ಲವೋ , ಆದರೆ ಈ ಹುಡುಗಿಯರ ಮುಂಗುರುಳು ಮತ್ತು ಕಣ್ಣಿಗೆ ಆಕರ್ಷಿತರಾಗದವರಿಲ್ಲ.
ಇವೆರಡರ ಅನ್ಯೂನ್ಯ ಪ್ರೀತಿಯನ್ನು ನೋಡುತ್ತಾ ಹುಡುಗರು, ಗೊತ್ತಿದ್ದೊ , ಗೊತ್ತಿಲ್ಲದೆಯೋ , ಮುಂಗುರುಳಿನ ಹಿಂದೆ ಅವಿತಿರುವ ಕಿವಿಗೆ ಮತ್ತು ಕಿವಿಯೋಲೆಗೆ ಆಕರ್ಷಿತರಾಗಿಬಿಟ್ಟಿರುತ್ತಾರೆ.ಆ ಕ್ಷಣದಲ್ಲಲ್ಲದಿದ್ದರೂ ಮುಂದೆ ಯಾವಾಗಲಾದರೂ ಆ ಓಲೆಯ ಜೊತೆ ಅವಿನಾಭಾವ ಸಂಬಂಧ ಬೆಳೆದುಬಿಟ್ಟಿರುತ್ತದೆ.
ಹೆಣ್ಣಿಗೆ, ಹಣೆಯ ಕುಂಕುಮ , ಕಿವಿಯ ಓಲೆ, ಕತ್ತಿನ ಸರ, ಕೈ ಬಳೆ ಅವಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.ಇವುಗಳಲ್ಲಿ ಯಾವುದೊಂದಾದರೂ ಇರದಿದ್ದಲ್ಲಿ , ಅವಳ ಸೌಂದರ್ಯದಲ್ಲಿ ಪರಿಪೂರ್ಣತೆ ಇರುವುದಿಲ್ಲ.
ಆದರೆ ಹುಡುಗರಿಗೂ , ಕಿವಿ ಓಲೆಗೂ ಎತ್ತಣಿಂದೆತ್ತ ಸಂಬಂಧ... ?
ಹೌದು, ಹುಡುಗರಿಗೆ , ತಮ್ಮ ಮನದಾಳದ ಪ್ರೇಯಸಿಗೋ.. ಪ್ರೀತಿಯ ಗೆಳತಿಗೋ , ಅವರ ಹುಟ್ಟು ಹಬ್ಬಕ್ಕೊ ಅಥವಾ ಮತ್ಯಾವುದೋ ವಿಶೇಷ ದಿನಕ್ಕೋ ಉಡುಗೊರೆಗಳನ್ನು ಹುಡುಕುವುದು ಅತ್ಯಂತ ಕಠಿಣ ಕೆಲಸ. ಆದರೆ ಒಳ್ಳೆಯ ಉಡುಗೊರೆ ಕೊಡಬೇಕೆಂಬ ಆಸೆ.
ಇಂತಹ ಸಂಧರ್ಭದಲ್ಲಿ , ಮನಸ್ಸಿನ ಮೂಲೆಯಲ್ಲೆಲ್ಲೊ , ಅಂದು ಮುಂಗುರುಳ ಹಿಂದೆ ಅವಿತು ಕುಳಿತಿದ್ದ ಕಿವಿಯೇ ಮೊದಲು ನೆನಪಾಗುವುದು.
ಅದೆಷ್ಟು ಹುಡುಗರು ತಮ್ಮ ಪ್ರೇಯಸಿಗೆ ಮೊದಲ ಉಡುಗೊರೆಯಾಗಿ ಕಿವಿಯ ಓಲೆಯನ್ನು ಕೊಟ್ಟಿಲ್ಲ ಹೇಳಿ..?
ಪ್ರತಿಯೊಬ್ಬ ಪ್ರೇಮಿಯೂ, ತನ್ನ ಪ್ರೇಯಸಿಗೆ ಒಂದಲ್ಲ ಒಂದು ಬಾರಿ ಓಲೆಯನ್ನು ಉಡುಗೊರೆಯಾಗಿ ನೀಡಿಯೇ ನೀಡಿರುತ್ತಾನೆ. ನೀಡಿಲ್ಲದಿದ್ದರೂ , ಒಮ್ಮೆಯಾದರೂ ನೀಡಬೇಕೆಂದುಕೊಂಡಿರುತ್ತಾನೆ.
ಪ್ರೇಯಸಿ ಇರುವವರು ಮಾತ್ರವಲ್ಲದೆ, ತಮಗೆ ಸಿಗೋ ಹುಡುಗಿಗಾದರೂ ಈ ಓಲೆಯನ್ನು ಉಡುಗೊರೆಯಾಗಿ ಕೊಡಬೇಕೆಂದುಕೊಂಡವರು ಬಹಳಷ್ಟು ಜನ.
ಬೇಡವೆಂದರೂ ಆಗಾಗ ಕಣ್ಣಿಗೆ ಬೀಳುವ ಓಲೆಗಳನ್ನು ನೋಡಿ , ಇದೇ ತರಹದ್ದಲ್ಲವೇ ತಾನು ಅವಳಿಗೆ ಕೊಟ್ಟದ್ದೆಂದು ಮರುಕಪಡುವ ಭಗ್ನ ಪ್ರೇಮಿಗಳೆಷ್ಟೋ...
ಹಾಗೆ ನೋಡಿದರೆ , ಓಲೆಯ ಅಂಗಡಿಗಳಲ್ಲಿ ಹೆಚ್ಚಾಗಿ ಓಲೆಯನ್ನು ಕೊಳ್ಳುವವರು ಹುಡುಗರೇ...
ಹುಡುಗನೊಬ್ಬನೇ ಓಲೆಯನ್ನು ಕೊಳ್ಳಲು ಅಂಗಡಿಗೆ ಹೋದರೆ , ಅವನ ಪಾಡು ಹೇಳತೀರದು.ಅವನ ತಲೆಯಲ್ಲಿ ನೂರೆಂಟು ಯೋಚನೆಗಳು, ಆ ಬಣ್ಣದ ಓಲೆ ಅವಳ ಬಳಿ ಇರಬಹುದೆ ..? ಈ ಶೈಲಿಯದ್ದನ್ನು ಒಮ್ಮೆ ನೋಡಿದ ನೆನಪು... ಈ ಓಲೆ ಅವಳಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಅಂಜಿಕೆ …
ಬಣ್ಣ ಗೊತ್ತಾಗುವವರ ಕಥೆ ಇದಾದರೆ, ಬಣ್ಣವೇ ಗೊತ್ತಾಗದವರ ಗತಿ..ದೇವರೇ ಗತಿ .ಇಷ್ಟೆಲ್ಲಾ ಗೊಂದಲದಲ್ಲಿ ಕಷ್ಟ ಪಟ್ಟು ಹುಡುಕಿ ತಂದವರ ಕಷ್ಟ ಅವರಿಗೇ ಗೊತ್ತು.
ಅಷ್ಟೆಲ್ಲಾ ಕಷ್ಟಪಟ್ಟು ಹುಡುಕಿ, ಶೋದಿಸಿ, ಆರಿಸಿ ತಂದ ಓಲೆ , ಮುಂಗುರುಳಿನ ಹಿಂದೆ ಅವಿತಿರುವ ಕಿವಿಯಲ್ಲಿ ಬೆಚ್ಚಗೆ ಹೋಗಿ ಕುಳಿತರೆ, ಅದನ್ನು ನೋಡುವ ಸಂಭ್ರಮವೇ ಬೇರೆ.
ಇಷ್ಟೆಲ್ಲಾ ಕಷ್ಟಪಟ್ಟು ಹುಡುಕಿ ತಂದು , ತಮ್ಮ ಪ್ರೇಯಸಿಗೆ ಕೊಡಲಾಗದೆ , ತಮ್ಮ ಬಳಿಯೂ ಇಟ್ಟುಕೊಳ್ಳಲಾಗದೆ, ಮೂಲೆಯಲ್ಲೆಲ್ಲೋ ಅವಿತಿಟ್ಟು ಆಗಾಗ ಅದನ್ನು ನೋಡಿ ದುಃಖಪಡುವವರ ಕಥೆಯೇ ಬೇರೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ತಮ್ಮ ಪ್ರೇಯಸಿಯ ಕಿವಿಯಲ್ಲಿ ಬೆಚ್ಚಗೆ ಕುಳಿತಿರುವ ಓಲೆಗಳೆಷ್ಟೋ... ಮೂಲೆಯಲ್ಲೆಲ್ಲೊ ಅವಿತಿಟ್ಟ ಓಲೆಗಳೆಷ್ಟೋ... ನೆನಪಿನ ಪುಟಗಳಲ್ಲಿ ಹುದುಗಿರುವ ಓಲೆಗಳೆಷ್ಟೋ...?
ಯಾವ ಚಿಪ್ಪಿನಲ್ಲಿ , ಯಾವ ಹನಿಯು ಮುತ್ತಾಗುವುದೋ?
ಯಾರ ಕಿವಿಯ ಓಲೆಯಲ್ಲಿ ಹೊಳೆಯುವುದೋ?
ಯಾವ ಮೂಲೆಯಲ್ಲಿ ಹುದುಗುವುದೋ?
ಯಾರು ಬಲ್ಲರು ...?
- ಫಣೀಶ್
ದುದ್ದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ