ಭಾನುವಾರ, ಜೂನ್ 19, 2016

ನಮ್ಮ ಎಲ್ಲಾ ಕುಚೇಷ್ಟೆಗಳನ್ನು ನೋಡಿಯೂ, ನೋಡದಂತಿದ್ದಿದ್ದು ಅವನ ಸ್ಯಾಮ್ ಸಂಗ್ ಟ್ಯಾಬು


"ನಮ್ಮಎಲ್ಲಾಕುಚೇಷ್ಟೆಗಳನ್ನುನೋಡಿಯೂ,ನೋಡದಂತಿದ್ದಿದ್ದು ಅವನ ಸ್ಯಾಮ್ ಸಂಗ್ ಟ್ಯಾಬು "

 
ಆ ಎರಡು ರಸ್ತೆಗಳಲ್ಲಿ ಒಂದಕ್ಕೆ ಧನ್ವಂತರಿ ರಸ್ತೆಯೆಂದೂ , ಇನ್ನೊಂದಕ್ಕೆ ಕಲ್ಯಾಣ ರಸ್ತೆ ಎಂದು ಹೆಸರಿಟ್ಟಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ , ಬಿ.ಎಂ ರಸ್ತೆಯಲ್ಲಿ ಎಡಕ್ಕೆ ಕೃಷ್ಣ ಹೋಟೆಲ್, ಕೃಷ್ಣಾ ಹೋಟೆಲ್ ನ ನೇರಕ್ಕೆ , ಬಿ.ಎಂ ರಸ್ತೆಯಲ್ಲಿ ಬಲಕ್ಕೆ ಹೊರಳಿದರೆ "ಸಂಪಿಗೆ ರಸ್ತೆ" .ಇಲ್ಲಿಂದ ಪ್ರಾರಂಭಗೊಂಡು ರವೀಂದ್ರನಗರದಲ್ಲಿ ಕೊನೆಗೊಳ್ಳುವ ಈ ರಸ್ತೆಯುದ್ದಕ್ಕೂ ಆಸ್ಪತ್ರೆಗಳ ಕಾರುಬಾರು.

ಹೆಬ್ಬಾರ್ ಕ್ಲಿನಿಕ್ ನಿಂದ ಮೊದಲುಗೊಂಡು , ಮುಂದಕ್ಕೆ ಮಂಗಳಾ ನರ್ಸಿಂಗ್ ಹೋಮ್ , ಕೊಂಚ ಬಲಕ್ಕೆ ಹೊರಳಿದರೆ ಜನತಾ ಆಸ್ಪತ್ರೆ, ಭಾಸ್ಕರ್ ಶಾಪ್, ಇನ್ನು ಮುಂದಕ್ಕೆ ಎಡಗಡೆಗೆ ವಾಸನ್ ಐ ಕೇರ್ , ನಂತರ ಮಣಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ , ಇನ್ನೂ ಮುಂದಕ್ಕೆ ಸಂಜೀವಿನಿ ಆಸ್ಪತ್ರೆ. ಹೀಗೆ ಆಸ್ಪತ್ರೆಗಳ ಸಾಲು ಸಾಲು. 

ಬಿ.ಎಂ ರಸ್ತೆಯ ಕೃಷ್ಣಾ ಹೋಟೆಲ್ ನಿಂದ ಕೊಂಚ ಮುಂದಕ್ಕೆ ಬಂದು ,ಕ್ವಾಲಿಟಿ ಬಾರ್ ಗೆ ನೇರವಾಗಿ , ಬಲಕ್ಕೆ ತಿರುಗಿದರೆ , "ಶಂಕರಮಠ ರಸ್ತೆ " ಯಾಗಿ ಶುರುವಾಗುವ ಈ ರಸ್ತೆಯುದ್ದಕ್ಕೂ ಸಾಲು ಸಾಲು ಕಲ್ಯಾಣ ಮಂಟಪಗಳು.
 
ಎಸ್. ಆರ್. ಎಸ್ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ ಮುಂದೆ ಶಂಕರಮಠ ,ಬಲಕ್ಕೆ ವೆಂಕಟಾದ್ರಿ , ಇನ್ನೂ ಮುಂದಕ್ಕೆ ದೊಡ್ಡಿ ರೋಡ್ ಸರ್ಕಲ್ ನಲ್ಲಿ , ಎಂ.ಜಿ ರೋಡ್ ಎಂದು ಹೆಸರು ಬದಲಿಸಿಕೊಂಡು , ಎಂ. ಜಿ ರೋಡ್ ನ ಪ್ರಾರಂಭದಲ್ಲಿ ಆದಿ ಚುಂಚನಗಿರಿ , ಅದರ ಎದುರಿಗೆ ಗುರು ರಾಘವೇಂದ್ರ ಕಲ್ಯಾಣ ಮಂಟಪ ,ಪಕ್ಕಕ್ಕೆ ಮಹಾವೀರ ಭವನ , ಅದರ ಎದುರಿಗೆ ಗಂಗಾ ಭವನ , ಎಂ .ಜಿ ರಸ್ತೆಯಲ್ಲೇ ಹಾಗೇ ಮುಂದುವರೆದು , ಸ್ಟೇಡಿಯಂ ಬಳಿ ಇರುವ ಐಶ್ವರ್ಯ ಕನ್ವೆಂಕ್ಷನ್ ಹಾಲ್ ದಾಟಿ , ವಿದ್ಯಾನಗರದ ರಿಂಗ್ ರೋಡ್ ಬಳಿ ಇರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಬಳಿ ಕೊನೆಗೊಳ್ಳುತ್ತದೆ.

ಒಂದಾ, ಎರಡಾ... ಸಾಲು ಸಾಲು ಆಸ್ಪತ್ರೆಗಳು , ಸಾಲು ಸಾಲು ಕಲ್ಯಾಣ ಮಂಟಪಗಳು ಅಕ್ಕ ಪಕ್ಕದ ರಸ್ತೆಗಳಲ್ಲಿ.

ಈ ಎಂ .ಜಿ ರಸ್ತೆ ಬೆಂಗಳೂರಿನ ಎಂ .ಜಿ ರೋಡಿನಷ್ಟು ಫೇಮಸ್ ಅಲ್ಲದಿದ್ದರೂ , ಹಾಸನದ ಮಟ್ಟಿಗೆ , ಅದರಲ್ಲೂ ಕಾಲೇಜು ಹುಡುಗ ಹುಡುಗಿಯರಿಗೆ ಫೇವರೇಟ್ ಸ್ಪಾಟ್.

ಪ್ರತಿನಿತ್ಯ ಸಂಜೆ , ಇಲ್ಲಿಗೆ ಒಂದು ವಿಸಿಟ್ ಕೊಟ್ಟು , ಅಲ್ಲೇ ರಸ್ತೆ ಬದಿಯ ಗೋಬಿಯೋ , ಪವಿತ್ರ ಫಾಸ್ಟ್ ಫುಡ್ ನಲ್ಲಿ ಜ್ಯೂಸೋ ಕುಡಿದು, ಅಲ್ಲೇ ಕೊಂಚ ಬಲಕ್ಕೆ ಇದ್ದೂ ಇಲ್ಲದಂತಿದ್ದ, ಡೇ ಲೈಟ್ ನಲ್ಲಿ ಸಿಗರೇಟ್ ಸೇದದಿದ್ದರೆ ಹುಡುಗರ ಕಾಲೇಜು ಲೈಫ್ ವ್ಯರ್ಥವೆಂದೇ ಅರ್ಥ.

ಅದರಲ್ಲೂ , ಈ ಗುರುವಾರದಂದು , ರಾಯರ ಸನ್ನಿಧಿಯ ನೆಪಕ್ಕಾದರೂ ಹುಡುಗಿಯರು ಈ ರಸ್ತೆಗೆ ಬರುವುದು ಸಂಪ್ರದಾಯವಾಗಿಬಿಟ್ಟಿತ್ತು.

ಕೈಯ್ಯಲ್ಲಿ ದುಡ್ಡು ಇರಲಿ, ಬಿಡಲಿ ದಿನಕ್ಕೆ ಒಮ್ಮೆಯಾದರೂ ಎಂ.ಜಿ ರಸ್ತೆ ಸುತ್ತಿ ಬರದಿದ್ದರೆ ಮನಸ್ಸಿಗೆ ಸಮಾಧಾನವೇ ಆಗುತ್ತಿರಲಿಲ್ಲ.

ಈ ರಸ್ತೆಗಳ ಬಗ್ಗೆ ನಮ್ಮ ನಮ್ಮಲ್ಲೇ ಒಂದು ಜೋಕ್ ಹುಟ್ಟಿಕೊಂಡಿತ್ತು , " ಅಲ್ಲೇ ಶಂಕರಮಠದಲ್ಲೋ , ಎಸ್.ಆರ್.ಎಸ್ ಅಲ್ಲೋ ಮದುವೆ ಮಾಡಿಕೊಂಡು , ಹಂಗೆ ಮುಂದೆ ಬಂದು , ಎಂ.ಜಿ ರೋಡಲ್ಲಿ ಪಾನಿಪುರಿ ತಿಂದು , ಪವಿತ್ರದಲ್ಲಿ ಜ್ಯೂಸ್ ಕುಡಿದು , ಕೈ ಕೈ ಹಿಡಿದು ಒಂದು ರೌಂಡ್ ಆ ಮೂಲೆ ತನಕ ಹೋಗಿ, ವಾಪಸ್ ಹೋಗ್ತಾ , ಸಂಪಿಗೆ ರಸ್ತೆಯ ಮಣಿ ಆಸ್ಪತ್ರೆಲೋ , ಮಂಗಳಾ ನರ್ಸಿಂಗ್ ಹೋಮಲ್ಲೋ , ಹೆರಿಗೆ ಮಾಡಿಸಿಕೊಂಡು , ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಮನೆಗೆ ಹೋಗಬಹುದು ", ಎಂದು.

ಕೈಯ್ಯಲ್ಲಿ ದುಡ್ಡಿದ್ದಾಗ ಸ್ವರ್ಗವಾಗಿದ್ದ ಎಂ.ಜಿ ರೋಡು , ದುಡ್ಡಿಲ್ಲದಿದ್ದಾಗಲೂ ಆ ಕಲ್ಯಾಣ ಮಂಟಪಗಳ ದಯೆಯಿಂದ ಒಂದು ರೀತಿಯ ವರದಾನವಾಗಿತ್ತು.

" ನಮ್ ಫ್ರೆಂಡ್ ಮದುವೆಯೊಂದಿದೆ , ಇಲ್ಲೇ ಅನ್ನಪೂರ್ಣೇಶ್ವರಿ ಚೌಟ್ರಿಲಿ , ಊಟ ಮಾಡಿಕೊಂಡು ಬರ್ತಿವಿ ", ಎಂದು ಈ ಕಲ್ಯಾಣ ಮಂಟಪಗಳ ಬಿಟ್ಟಿ ಊಟಕ್ಕೆ ಅಡಿಪಾಯ ಹಾಕಿದವರೇ ನಮ್ಮ ಗಣೇಶ, ತೇಜೇಶ್.

ಮೊದಮೊದಲು ಯಾರದ್ದೋ ಪರಿಚಿತರ ಮದುವೆಯೇನೋ ಎಂದು ಸುಮ್ಮನಾಗುತ್ತಿದ್ದ ನಾನು , ಇವರು ವಾರಕ್ಕೆ ಮೂರು ದಿನ , ಮದುವೆ ಊಟ ಮಾಡುವುದನ್ನು ನೋಡಿ , ಒಮ್ಮೆ , " ಏನ್ ಯಾವಾಗ್ಲೂ ಅವರ ಮದುವೆ , ಇವರ ಮದುವೆ ಅಂತ ಹೋಗ್ತೀರಲ್ಲಾ , ನಿಮ್ಮ ಕಡೆ ಪ್ರತೀ ವಾರ ಅಷ್ಟೊಂದು ಮದುವೆ ನಡಿಯುತ್ತಾ ", ಎಂದು ಕೇಳಿಯೇ ಬಿಟ್ಟೆ.

" ಬರೀ ನಮ್ ಕಡೇದೇನು .. ನೀನು ಬಂದರೆ ನಿಮ್ ಕಡೇ ಮದುವೆನೂ , ವಾರ ವಾರ ನಡಿಯುತ್ತೆ , ಬೇಕಾದ್ರೆ ನಾಳೆ ಬಾ", ಎಂದ ಗಣೇಶ.

" ಅಯ್ಯೋ ನನ್ಮಕ್ಳಾ , ಯಾರ್ಯಾರ್ದೋ ಮದುವೆಗೆ ಹೋಗಿ ನಮ್ ಕಡೆದು ಅಂತೀರಲ್ಲೋ", ಎಂದೆ.

" ಅಲ್ಲಿಗೆ ಹೋಗೋ ತನಕ ಯಾರ್ಯಾರ್ದೋ ಅಷ್ಟೇ , ಆಮೇಲೆ , ನಮ್ ರವಿದೋ , ನಮ್ ರೂಪಂದೋ ಆಗಿಬಿಡುತ್ತೆ , ನೀನು ಬಾ ", ಎಂದ ತೇಜೇಶ್.

ಹೀಗೆ ನಮ್ ಹರ್ಷಿ ಮದುವೆ , ನಮ್ ಸಂತು ಮದುವೆ , ಎಂದು ಪ್ರಾರಂಭವಾದ ಮದುವೆ ಊಟಗಳು , ಮುಗಿದದ್ದು ಮಾತ್ರ ನಾವು ಊರು ಬಿಟ್ಟು ಬಂದ ಮೇಲೆಯೇ.

ಮೊದಮೊದಲು ಭಯ ಪಡುತ್ತಿದ್ದ ನನಗೆ ಧೈರ್ಯ ತುಂಬಿದವರೇ ಅವರಿಬ್ಬರು , ಅಷ್ಟರಲ್ಲಾಗಲೇ ಅವರು ಎಕ್ಸ್ ಪರ್ಟ್ಸ್ ಆಗಿದ್ದರು , ನಾನಿನ್ನೂ ಬಿಗಿನರ್ ಆಗಿದ್ದೆ.

ಕೆಲವೊಮ್ಮೆ ಮದುವೆಯ ಸಭಾಗೃಹಕ್ಕೆ ಸುಮ್ಮನೆ ನಾಮ್ ಕೇ ವಾಸ್ತೆ ಹೋಗಿ , ಸ್ವಲ್ಪ ಹೊತ್ತು ಕುಳಿತಿದ್ದು ಊಟಕ್ಕೆ ಹೋದರೆ , ಕೆಲವೊಮ್ಮೆ ನೇರವಾಗಿ ಊಟದ ಗೃಹಕ್ಕೆ ಹೋಗಿ ಅಲ್ಲಿಂದಲೇ ಹೊರಬೀಳುತ್ತಿದ್ದೆವು.

ಆ ರಸ್ತೆಯಲ್ಲಿ ಅಷ್ಟೆಲ್ಲಾ ಕಲ್ಯಾಣ ಮಂಟಪಗಳಿದ್ದರೂ , ನಮ್ಮ ಮೊದಲನೇ ಆಯ್ಕೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪವೇ, ಏಕೆಂದರೆ , ಅಲ್ಲಿದ್ದ ಎಲ್ಲಾ ಕಲ್ಯಾಣ ಮಂಟಪಗಳ ಪೈಕಿ ವೈಭವವಾದ ಹಾಗೂ ದೊಡ್ಡ ಮಂಟಪ ಇದೊಂದೇ. ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಊಟ ಸಿಗುತ್ತದೆ ಎಂಬ ಆಸೆ. ನಿಜಕ್ಕೂ ಅವಳು ಅನ್ನಪೂರ್ಣೇಶ್ವರಿಯೇ , ನಮ್ಮ ಆಸೆಗೆ ಎಂದೂ ತಣ್ಣೀರೆರಚಿದವಳಲ್ಲ.

ಮಾಡುವುದೇ ಬಿಟ್ಟಿ ಊಟ ಅದರಲ್ಲೂ ಛಾಯ್ಸ್ ಬೇರೆ ಇವರಿಗೆ ಎಂದುಕೊಂಡೀರಾ..

" ಹೇಗಿದ್ರೂ ಬಿಟ್ಟಿ ಊಟ , ಮಾಡೋದು ಮಾಡ್ತೀವಿ , ಚೆನ್ನಾಗಿರೋ ಕಡೇನೇ ಮಾಡೋಣ ", ಎನ್ನುವುದು ನಮ್ಮ ವಾದ.

ಮನೆಯಲ್ಲಿ ಅಡಿಗೆ ಮಾಡಿದ್ದರೂ, ಎಲ್ಲರ ಮನೆ ಬೇರೆ ಬೇರೆ ಬಳಿ ಇದ್ದಿದ್ದರಿಂದ, " ಮನೆಗೆ ಯಾರ್ ಹೋಗ್ತಾ
ರೆ, ಇಲ್ಲೆ ಎಲ್ಲಾದ್ರು ಊಟ ಮಾಡಿ, ಸಂಜೆ ತನಕ ಸುತ್ತಾಡಿ ಹೋದರಾಯಿತು ", ಎಂಬ ಅಸಡ್ಡೆ.

ಈ ಸಂಭ್ರಮಕ್ಕೆಲ್ಲಾ ಕಡಿವಾಣ ಬೀಳುತ್ತಿದ್ದದ್ದು , ಮಂಗಳವಾರ ಮತ್ತು ಶನಿವಾರ , ಯಾಕಂದ್ರೆ ಅವತ್ತ್ಯಾರು ಮದುವೆ ಮಾಡಲ್ಲ ನೋಡಿ.

ನಮ್ಮ ಇಷ್ಟೆಲ್ಲಾ ಕುಚೇಷ್ಟೆಗಳನ್ನು , ನೋಡಿಯೂ ನೋಡದಂತಿದ್ದಿದ್ದು ನಮ್ಮ ತೇಜೇಶನ ಸ್ಯಾಮ್ ಸಂಗ್ ಟ್ಯಾಬು .

ನಮ್ಮ ಎಲ್ಲಾ ಬಿಟ್ಟಿ ಊಟದ ಯುದ್ದಗಳಿಗೂ ಉಪಯೋಗಿಸುತ್ತಿದ್ದದ್ದು ಅದೊಂದೇ ಅಸ್ತ್ರವನ್ನು , ಪುಟ್ಟ ಸ್ಲೇಟಿನಂತಿದ್ದ ಆ ಟ್ಯಾಬನ್ನು ಕೈಯ್ಯಲ್ಲಿ ಹಿಡಿದು ಹೋದರೆ ಜನ ಮರ್ಯಾದೆ ಕೊಡುತ್ತಾರೆಂಬ ಹುಸಿ ನಂಬಿಕೆ.

ಮರ್ಯಾದೆ ಕೊಡಲಿ , ಬಿಡಲಿ , ಅನುಮಾನಿಸಿ ನಮಗೆ ಥಳಿಸುವುದಿಲ್ಲವೆಂಬ ಧೈರ್ಯ ಅಷ್ಟೆ. ಟ್ಯಾಬಿನ ದಯೆಯಿಂದಲೋ ಏನೋ ಇವತ್ತಿನ ವರೆಗೆ ಯಾರೂ ಥಳಿಸಿಲ್ಲ ಎಂಬುದೇ ಸಂತೋಷದ ಸಂಗತಿ.

ಆದರೆ , ಇದುವರೆಗೂ ಹೋಗಿರುವ ಯಾವ ಮದುವೆಯಲ್ಲೂ , ವಧು ವರರಿಗೆ ಶುಭಾಶಯ ಕೋರಿಲ್ಲ ಎಂಬುದೇ ದುಃಖದ ಸಂಗತಿ. ಶುಭಾಶಯ ಇರಲಿ, ಕೆಲವರ ಮುಖವೇ ನೋಡಿಲ್ಲದ್ದು ವಿಪರ್ಯಾಸವೇ ಸರಿ.

ದೊಡ್ಡವರು ಒಂದು ಮಾತು ಹೇಳುತ್ತಾರೆ , " ನಾವು ತಿನ್ನುವ ಪ್ರತಿ ಅನ್ನದ ಅಗುಳಿನ ಮೇಲೆ ನಮ್ಮ ಹೆಸರು ಬರೆದಿರುತ್ತದೆ ", ಅಂತ .

ಅನ್ನದ ಅಗುಳಿನ ಮೇಲೆ ನಮ್ಮ ಹೆಸರು ಬರೆದಿತ್ತೋ , ಇಲ್ಲವೋ ಗೊತ್ತಿಲ್ಲ , ಆದರೆ ನಮ್ಮ ಕಷ್ಟಕಾಲದಲ್ಲಿ ನಮ್ಮ ಹೊಟ್ಟೆ ತುಂಬಿಸಿದ ಆ ಜೋಡಿಗಳ ಸಂಸಾರ ಸುಖವಾಗಿರಲಿ ಎಂಬುದೇ ನಮ್ಮ ಆಶಯ.


"ಅದೇನೇ ಆಗಲಿ ,ಈಗ್ಲೂ ಎಂ.ಜಿ ರೋಡ್ ಗೆ ಹೋದ್ರೆ, ಅದೂ ಊಟದ ಟೈಮ್ ಏನಾದ್ರೂ ಆಗಿದ್ರೆ ,ಮೊದಲು ನಮ್ಮ ಬಾಯಿಂದ ಬರೋದು , ನಡಿರೋ ಅನ್ನಪೂರ್ಣೇಶ್ವರಿಗೆ ಹೋಗಣಾ", ಅಂತಾನೆ.

                                                                                                                                                                                  - ಫಣೀಶ್ ದುದ್ದ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ