ಮಳೆಗಾಲದ ಒಂಟಿತನ ಮತ್ತು ಆ ಛತ್ರಿ..
" ಮಳೆ ಬರ್ತಿದೆ , ಛತ್ರಿ ತಗೊಂಡು ಹೋಗೋ ", ಎಂದು ಅದೆಷ್ಟು ಬಾರಿ ಹೇಳಿದರೂ , ಅಂದು ಅದರ ಕಡೆ ತಿರುಗಿಯೋ ನೋಡದ ಬದುಕು ಇವತ್ತು ಈ ಸ್ಥಿತಿಗೆ ಬಂದುಬಿಟ್ಟಿದೆ.
ಹುಡುಗರು ಕೈಯ್ಯಲ್ಲಿ ಛತ್ರಿ ಹಿಡಿದು ರಸ್ತೆಯಲ್ಲಿ ಹೋಗುವುದೇ ದೊಡ್ಡ ಅವಮಾನ , ಅದೇನಿದ್ದರೂ ಹುಡುಗಿಯರಿಗೇ ಸೀಮಿತ ಎಂದು ಪರಿಗಣಿಸಿದ ಕಾಲ ಒಂದಿತ್ತು.
ಈಗ ಕಾಲ ಬದಲಾಗಿದೆ.
ಕಾಲ ಅದೇ ಬದಲಾಗಿದೆಯೋ , ನನ್ನನ್ನೇ ಬದಲಾಯಿಸಿಬಿಟ್ಟಿದೆಯೋ ಗೊತ್ತಿಲ್ಲ.
ಮೊನ್ನೆ , ನೂರಾಎಂಬತ್ತು ರೂಪಾಯಿ ಕೊಟ್ಟು ಒಂದು ಛತ್ರಿ ತಂದದ್ದೂ ಆಯಿತು , ಸೋನೆ ಮಳೆಯಲ್ಲಿ , ಪುಣೆಯ ರಸ್ತೆಗಳಲ್ಲಿ ಅದನ್ನು ಹಿಡಿದು ಓಡಾಡಿಯೂ ಆಯಿತು.
ಭೋರ್ಗರೆದು ಸುರಿಯುವ ಮಳೆಗೆ ಸಿಕ್ಕಿ , ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಕುಳಿತು ನಿರ್ಭೀತಿಯಿಂದ ಸ್ನೇಹಿತರೊಂದಿಗೆ ಗಂಟೆಗಟ್ಟಲೇ ಹರಟುತ್ತಿದ್ದ ನೆನಪು ಇನ್ನೂ ಹಸಿಯಾಗಿರುವಾಗಲೇ , ಕೊಂಚವೇ ಮಳೆ ಬಂದರೂ ಆದಷ್ಟು ಬೇಗ ಮನೆ ಸೇರಿಕೊಳ್ಳಬೇಕೆಂಬ ಭೀತಿ ಶುರುವಾಗಿದೆ.
ಮಡಿಕೇರಿಯಿಂದ ಹಾಸನದವರೆಗೂ , ಸುರಿವ ಮಳೆಯನ್ನೂ ಲೆಕ್ಕಿಸದೇ ಬೈಕಿನಲ್ಲಿ ಬಂದ ಹುಚ್ಚು ಧೈರ್ಯ, ಇಂದು ಛತ್ರಿಯಿಲ್ಲದೆ ಅಷ್ಟು ದೂರ ಹೋಗಲೂ ಇಲ್ಲದಂತಾಗಿದೆ.
ಕೊಡೆ ಹಿಡಿದು ಹೋಗುವ ಹುಡುಗರನ್ನು ಗೇಲಿ ಮಾಡುತ್ತಿದ್ದ ಕಾಲ ಬದಲಾಗಿದೆ , ಮನಸ್ಸು ಪ್ರಬುಧ್ದವಾಗಿದೆ , ವಯಸ್ಸು ತನ್ನೆಲ್ಲಾ ಹುಡುಗಾಟವನ್ನು ಬಿಟ್ಟು , ಒಂಟಿತನ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುವಂತೆ ಮಾಡಿದೆ .
ಅಂದಿನ ಎಲ್ಲಾ ಹುಡುಗಾಟಗಳಿಗೂ , ಹುಚ್ಚಾಟಗಳಿಗೂ ಜೊತೆಗಾರರಿದ್ದರು. ಈಗಲೂ ಇಲ್ಲ ಅಂದಲ್ಲ , ಈ ಕ್ಷಣಕ್ಕೆ ಜೊತೆಯಲ್ಲಿಲ್ಲ ಅಷ್ಟೆ.ಆದರೇ ಅದೇ ಹುಡುಗಾಟಿಕೆ ಈಗಲೂ ಅವರಲ್ಲಿ ಉಳಿದಿರುವುದು ಅನುಮಾನವೇ ಸರಿ , ಕಾಲ ಅವರ ಬದುಕನ್ನೂ ಬದಲಿಸಿಬಿಟ್ಟಿದೆ.
ಸದ್ಯಕ್ಕೆ ಇಲ್ಲಿನ ಮಳೆಗಾಲದ ಈ ಒಂಟಿತನಕ್ಕೆ ,ಅಂದು ಬೇಡವಾಗಿದ್ದ ಛತ್ರಿ ಇಂದು ಜೊತೆಗಾರನಾಗಿದೆ .
ಅದಕ್ಕೇ ಏನೋ ಅಜ್ಜಿ ಸತ್ತಾಗಿನಿಂದ ಮಳೆ ಬರಲೀ , ಬಿಡಲಿ, ಅಜ್ಜ ತಮ್ಮ ದೊಡ್ಡ ಕೊಡೆಯನ್ನು ಊರುಗೋಲಿನಂತೆ ಹಿಡಿದು ಸಂಜೆ ವಾಕಿಂಗ್ ಹೋಗುತ್ತಿದ್ದಿದ್ದು ...
ಅದೇನೇ ಇರಲಿ , ಅಂದು ನಾನು ಗೇಲಿ ಮಾಡುತ್ತಿದ್ದ ಹುಡುಗರ ಕೈಯ್ಯಲ್ಲಿದ್ದ ಅದೇ ಛತ್ರಿ , ಇಂದು ಮಳೆಗಾಲದ ಈ ಒಂಟಿತನಕ್ಕೆ ಆಸರೆಯಾಗಿಬಿಟ್ಟಿದೆ .
-ಫಣೀಶ್ ದುದ್ದ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ